ಜಿಲ್ಲೆ

ಹಂಪಿ ಸ್ಮಾರಕಗಳಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್; ವೈರಲ್ ಆದ ಚಿತ್ರಗಳು

ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಧಿಕಾರಿಗಳು

ಹೊಸಪೇಟೆ: ಹಂಪಿಯ ಕಮಲಮಹಲ್ ಸ್ಮಾರಕದಲ್ಲಿ ನಿಯಮ ಉಲ್ಲಂಘಿಸಿ ವಿವಾಹಪೂರ್ವ ಫೋಟೋಶೂಟ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಂಧ್ರದ ಜಾಹ್ನವಿ ಮತ್ತು ಸಿದ್ದಾಂತ ಜೋಡಿಯ ವಿವಾಹಪೂರ್ವ ಫೋಟೊ ಶೂಟ್ ಇದಾಗಿತ್ತು. ಫೋಟೋಗಳು ವೈರಲ್ ಆದ ಮೇಲೆಯೇ ಅಧಿಕಾರಿಗಳ ಗಮನಕ್ಕೆ ಬಂದಿರುವುದು ಅಚ್ಚರಿ ತಂದಿದೆ.

ಫೋಟೋ ಶೂಟ್ ನಡೆದಿರುವುದು ಸಿಬ್ಬಂದಿ ಕಣ್ಣಿಗೆ ಬೀಳಲಿಲ್ಲವೇ ಅಥವಾ ಕಂಡರೂ ಹಣದಾಸೆಗೋ ಇಲ್ಲವೇ ಮೇಲಧಿಕಾರಿಗಳ ಮೌಖಿಕ ಆದೇಶಕ್ಕೆ ಮಣಿದರೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಯಾವಾಗ ಫೋಟೋಗಳು ವೈರಲ್ ಆಗಿ, ಸ್ಮಾರಕ ಪ್ರಿಯರ ಕೆಂಗಣ್ಣಿಗೆ ಗುರಿಯಾಯಿತೋ ಆಗ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಚಿತ್ರಗಳು ಮತ್ತು ವಿಡಿಯೋಗಳನ್ನು ವಿಜಯಿ ಸ್ಯಾಮಂಡ್ಕೋ ಎಂಬುವರು ಡಿಲಿಟ್ ಮಾಡಿದ್ದಾರೆ.

ಇದನ್ನು ಪರಿಶೀಲಿಸಿ, ಸಂಬಂಧಿತರ ವಿರುದ್ಧ ದೂರು ನೀಡಲಾಗುವುದು ಎಂದು ಪುರಾತತ್ವ ಇಲಾಖೆ ಡೆಪ್ಯೂಟಿ ಸೂಪರಿಟೆಂಡೆಂಟ್ ಪಿ.ಕಾಳಿಮುತ್ತು ತಿಳಿಸಿದ್ದಾರೆ.