ಹೊಸಪೇಟೆ: ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳಬೇಕೆAದು ಜಿ.ಪಂ. ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಂಪಿಯಲ್ಲಿ ಬುಧವಾರ ಹಮ್ಮಿಕೊಂಡ ಗ್ರಾಮ ಪಂಚಾಯಿತಿ ಮಟ್ಟದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು.
ಕಾನೂನಿನ ಚೌಕಟ್ಟಿನಲ್ಲಿ ಆಗುವಂತ ಎಲ್ಲಾ ಕೆಲಸ ಆದಷ್ಟು ಬೇಗ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುವೆ. ಸರ್ಕಾರ ಮಟ್ಟದಲ್ಲಿ ಹಾಗೂ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಆಗುವಂತ ಕೆಲಸ ಕಾರ್ಯಗಳಿದ್ದರೆ ವಿಶೇಷ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯ ಹಳ್ಳಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಸ್ಥಳೀಯರು ವಿಶ್ವ ಪ್ರಸಿದ್ಧ ಹಂಪಿಯ ಗ್ರಾಮ ಪಂಚಾಯಿತಿ ಕಟ್ಟಡವನ್ನು ಪರಂಪರಿಕ ಶೈಲಿಯಲ್ಲಿ ನಿರ್ಮಿಸಬೇಕು. ಇಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕು. ಪ್ರಕಾಶನಗರ ಗ್ರಾಮದಲ್ಲಿ ಹೊಸದಾಗಿ ಗ್ರಂಥಾಲಯ, 2 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ರುದ್ರಭೂಮಿಯನ್ನು ಮಂಜೂರು ಮಾಡಬೇಕು. ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಂಗಮAದಿರವನ್ನು ನಿರ್ಮಾಣ, ಜನತಾ ಪ್ಲಾಟ್‌ನಲ್ಲಿ ಮನೆಗಳನ್ನು ರಿಪೇರಿ ಮಾಡಿಕೊಳ್ಳಲು ಅನುಮತಿಯನ್ನು ನೀಡಬೇಕು. ಬೀದಿ ಬದಿ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ, ಸರ್ಕಾರಿ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಬೇಕು. ವಾಣಿಜ್ಯ ಚಟುವಟಿಕೆಗಳಿಗೆ ಪರವಾನಿಗೆ, ದೇಶ, ವಿದೇಶಿದ ಪ್ರವಾಸಿಗರಿಗೆ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಗೃಹಕ್ಕೆ ಅನುಮತಿ ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತಾತ್ಮಕ ಪರೀಕ್ಷೆಗಳಿಗೆ ತರಬೇತಿಗೆ ಪ್ರೋತ್ಸಹಿಸಿ, ಸೌಲಭ್ಯ ಕಲ್ಪಿಸಬೇಕು. ಹೊಸ ಹಂಪಿ ಗ್ರಾಮವನ್ನು ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಂಪಿ ಗ್ರಾಮ ಪಂಚಾಯಿತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಜಿ.ಪಂ. ಡಿಎಸ್ ಭೀಮಪ್ಪ ಲಾಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿನಿ, ಪಿಡಿಒ ಗಂಗಾಧರ, ಗೋಪಾಲ್ ಹೇಮಗಿರಿಯಪ್ಪ, ರೇಣುಕಮ್ಮ, ಹಂಪಮ್ಮ ಇತರರಿದ್ದರು.