ಜಿಲ್ಲೆ

ಬೆಳಕಿನ‌ ಮಾರ್ಗ ತೋರಿಸುವರೆ ಗುರು

ಮಂಜುನಾಥ

ಹೊಸಪೇಟೆ: ಒಬ್ಬ ವಿದ್ಯಾರ್ಥಿಯು ಉನ್ನತ ಸ್ಥಾನಕ್ಕೇರಲು ಪ್ರಾಥಮಿಕ ಶಾಲಾ ಶಿಕ್ಷಕರಿಂದ ವಿಶ್ವ ವಿದ್ಯಾಲಯಗಳ ಅಧ್ಯಾಪಕರವರೆಗೂ ಶ್ರಮ ಇರುತ್ತದೆ ಎಂದು ಮುಖ್ಯಶಿಕ್ಷಕ ಶಿವಕುಮಾರ ಹೇಳಿದರು.

ತಾಲೂಕಿನ ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  1998-1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಬೆಳ್ಳಿ ಹಬ್ಬದ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು.

ಮನಷ್ಯನಲ್ಲಿ ಮನುಷ್ಯತ್ವ ಇದ್ದವರು ಮಾತ್ರ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಲು ಸಹಕಾರಿಯಾಗಲಿದೆ. ನಮ್ಮ ಕೈಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಮಗೆಲ್ಲಾ ಕೀರ್ತಿಯನ್ನು ತಂದಿದ್ದಾರೆ. ಯಾವುದೇ ವಿದ್ಯಾರ್ಥಿಯು ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಶ್ರಮ ಅಪಾರವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ನಿವೃತ್ತ ಶಿಕ್ಷಕಿ ಶಾರದ ದೇವಿ ಮಾತನಾಡಿ, ತರಗತಿಗಳಲ್ಲಿ ಶಿಕ್ಷಕರು ಬೋಧನೆ ಮಾಡಲು ನಿರ್ಲಕ್ಷಿಸಿದರೆ ವಿದ್ಯಾರ್ಥಿಗಳ ಒಂದು ತಲೆಮಾರನ್ನು ಹಾಳು ಮಾಡಿದಂತಾಗಲಿದೆ. ವಿದ್ಯಾರ್ಥಿಗಳು ಶಿಕ್ಷಕರನ್ನು ದೇವರ ಸಮಾನರಂತೆ ಭಾವಿಸುತ್ತಾರೆ. ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೇ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರೆ ಮಾತ್ರ ಜೀವನದಲ್ಲಿ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಎದುರಾಗಿದ್ದು ಅವುಗಳು ಮುಚ್ಚದಂತಾಗಲು ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಮಗು ಹುಟ್ಟಿನಿಂದ ಸಾಯುವ ತನಕ ಜೀವನ ಮೌಲ್ಯ ಕಲಿಯುತಿರುತ್ತಾನೆ. ಮಕ್ಕಳ ಸಾಧನೆ ಶಿಕ್ಷಕರಿಗೆ ದೊಡ್ಡ ಖುಷಿ ತರುತ್ತದೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಾದ ಮಿಥಿಲಾಬಾಯಿ, ಶಾರದ ದೇವಿ, ವಿಶ್ವನಾಥ, ಮಧುಸೂದನ್, ಶಿಕ್ಷಕರಾದ ಉಮಾದೇವಿ, ಶಿವಕುಮಾರ್ ಗುರು ವಂದನಾ ಸನ್ಮಾನ ಸ್ವೀಕರಿಸಿದರು. ಹಳೆ ವಿದ್ಯಾರ್ಥಿಗಳಾದ ಗುಜ್ಜಲ ಹನುಮಂತ, ಅಂಬರೀಶ್, ಮರಿಸ್ವಾಮಿ, ವೆಂಕಟೇಶ, ಮಾಲನ್ ಬೀ, ಲಲಿತಾ, ಕವಿತಾ, ಹುಲಿಗೆಮ್ಮ, ಗೌಸ್, ಕುಮಾರ, ಪಂಪಾ, ಚಾಂದ್ ಬಾಷಾ, ಪರಶುರಾಮ ಇತರರಿದ್ದರು.