ಹೊಸಪೇಟೆ: ಮಹಿಳೆಯರ ಸಮಾನತೆ, ಸಶಕ್ತಿಕರಣ ಮತ್ತು ಯುವಕರ ಸಬಲೀಕರಣ ಗ್ಯಾರಂಟಿಯ ಉದ್ದೇಶವಾಗಿದೆ. ಸರ್ಕಾರವು ಬಹಳ ದಕ್ಷತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತಿದೆ ಎಂದು ಕಲಬುರಗಿ ವಿಭಾಗದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹೆರೋಜ್ ಖಾನ್ ಹೇಳಿದರು.
ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ ನಾಲ್ಕು ಕೋಟಿ ಜನರು ಗ್ಯಾರಂಟಿಯ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳಿಗೆ ನೇರವಾಗಿ ಹಣ ತಲುಪುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಶುಲ್ಕ, ತೆರಿಗೆ ಹೆಚ್ಚಾಗುತ್ತಿದೆ ಅಷ್ಟೇ. ಗೃಹಲಕ್ಷ್ಮಿ ಯೋಜನೆಯಿಂದ ಅನೇಕ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೋಗುವ ಅಭ್ಯರ್ಥಿಗಳಿಗೆ ಉಚಿತ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಸಲು ಪ್ರಯತ್ನಿಸುತ್ತೇನೆ ಎಂದರು.
ಯುವನಿಧಿಯ ಹಣ ಪಡೆಯಲು ಅನೇಕ ತಾಂತ್ರಿಕ ತೊಂದರೆಗಳು ಇವೆ. ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಆಗುತ್ತಿಲ್ಲ. ಶಕ್ತಿಯೋಜನೆ ಮಹಿಳೆಯರಿಗೆ ಸೀಮಿತವಾಗಿವೆ. ಪುರುಷರಿಗೆ ಯಾವುದೇ ಪ್ರಯೋಜನಗಳಿಲ್ಲ. ಬಸ್‌ಗಳ ಕೊರತೆ ಇದೆ. ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆಯೇ? ಗ್ಯಾರಂಟಿ ಯೋಜನೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಯಾಕೆ ಪರಿಗಣಿಸಿಲ್ಲ. 2 ತಿಂಗಳಿಂದ ಯುವನಿಧಿಗೆ ಹಣ ಬಂದಿಲ್ಲ. ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿದರು. ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಮೂರ್ತಿ, ಪ್ರಾಧ್ಯಾಪಕರಾದ ಡಾ.ಎಚ್.ಡಿ. ಪ್ರಶಾಂತ್, ಡಾ.ಕೆ.ಗೀತಮ್ಮ. ಡಾ.ಜನಾರ್ದನ, ಗೋವರ್ಧನ, ಡಾ.ಡಿ.ಮೀನಾಕ್ಷಿ ಇತರರಿದ್ದರು.