ಜಿಲ್ಲೆ

ಗೃಹೋಪಯೋಗಿ ಅನಿಲಕ್ಕೆ ಹೆಚ್ಚು ಹಣ ಪಡೆದರೆ ಏಜೆನ್ಸಿ ರದ್ದು

ಹೊಸಪೇಟೆ : ಗೃಹೋಪಯೋಗಿ ಅನಿಲ ಸಿಲಿಂಡರ್ ವಿತರಣೆ ವೇಳೆ ಬಿಲ್ ಮೊತ್ತಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರೂ ತೆಗೆದುಕೊಂಡಲ್ಲಿ ಅಂತಹ ಗ್ಯಾಸ್ ಏಜೆನ್ಸಿ ರವರ ವಿರುದ್ಧವು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಷ್ಟೇ ಅಲ್ಲದೇ ಲೈಸನ್ಸ್ ಅನ್ನು ರದ್ದು ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಗ್ಯಾಸ್ ಏಜೆನ್ಸಿಗಳು ಹಾಗೂ ಆಹಾರ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಸಿಲಿಂಡರ್ ಮನೆಗಳಿಗೆ ತಲುಪಿಸುತ್ತಿರುವ ಏಜೆನ್ಸಿಯ ಸಿಬ್ಬಂದಿಯವರು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಬಾರದು. 5 ಕಿಲೋ ಮೀಟರ್ ವರೆಗೂ ಗ್ಯಾಸ್ ಸಿಲಿಂಡರ್ ಗಳನ್ನು ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಮನೆಗೆ ತಲುಪಿಸುವುದು ಏಜೆನ್ಸಿಯವರ ಜವಬ್ದಾರಿ. ಯಾವುದೇ ಕಾರಣವನ್ನು ನೀಡದೆ ಗ್ರಾಹಕರ ಹತ್ತಿರ ಹೆಚ್ಚುವರಿಯಾಗಿ ಹಣ ಪಡೆಯುವಂತಿಲ್ಲ. ಗ್ರಾಹಕರೂ ಕೂಡ ಹಣ ಕೊಡುವಂತಿಲ್ಲ ಎಂದರು.

ಗ್ಯಾಸ್ ಬುಕ್ ಮಾಡಿದ 2 ರಿಂದ 3 ದಿನದೊಳಗಾಗಿ ಸಿಲಿಂಡರ್ ಅನ್ನು ವಿತರಿಸಬೇಕು. ಅನಾವಶ್ಯಕವಾಗಿ ಹೆಚ್ಚಿನ ಮೊತ್ತವನ್ನು ಕೊಡುವುದು ಕ್ರಿಮಿನಲ್ ಅಪರಾಧವಾಗಿದೆ. ಗೃಹಪಯೋಗಿ ಸಿಲಿಂಡರ್‌ಗಳನ್ನು ಯಾವುದೇ ಕಾರಣಕ್ಕೂ ಹೋಟೆಲ್‌ಗೆ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಹಾಗೂ ಯಾವುದೇ ಕ್ಯಾಶ್ ಮೆಮೋ ಇಲ್ಲದೇ ಸಿಲಿಂಡರ್ ವಿತರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಚ್ಚು ದರ ಪಡೆದ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾಹಕರು ಸಂಬAಧಿಸಿದ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರಿಗೆ ವಿವರದೊಂದಿಗೆ ದೂರು ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.