ಹೊಸಪೇಟೆ: ಮಾಜಿ ಸಚಿವ, ಹಾಲಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸಚಿವ ಆನಂದ ಸಿಂಗ್ ಅವರ ಸೋದರಳಿಯ ಸಂದೀಪ್ ಸಿಂಗ್ ಶನಿವಾರ ವಾಲ್ಮೀಕಿ ಸಮುದಾಯದ ಮುಖಂಡರ ಎದುರು ಕ್ಷಮೆ ಕೋರಿದ್ದು, ಪ್ರಕರಣ ಸುಖಾಂತ್ಯ ಕಂಡಿತು.
ನಾಲ್ಕೈದು ದಿನಗಳಿಂದ ಸಮುದಾಯದ ಮುಖಂಡರು ಸಭೆ ನಡೆಸಿ, ಪಟ್ಟಣ ಠಾಣೆ ಆವರಣದಲ್ಲಿ ಜಮಾಯಿಸಿ ಸಂದೀಪ್ ಸಿಂಗ್ ಕ್ಷಮೆಯಾಚಿಸಬೇಕೆಂದು ಪಟ್ಟುಹಿಡಿದಿದ್ದರು. ಡಿವೈಎಸ್ಪಿರೊಂದಿಗೆ ಚರ್ಚಿಸಿ ಎರಡು ದಿನಗಳ ಗಡುವು ನೀಡಿದ್ದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಸಮುದಾಯದ ಮುಖಂಡರು ಹಾಗೂ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಎಂ.ಶ್ರೀನಿವಾಸ್ ಸಮ್ಮುಖದಲ್ಲಿ ಸಂದೀಪ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಅವಹೇಳಕನಾರಿ ಪೋಸ್ಟ್ ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಪೋಸ್ಟ್ ಹಾಕುವುದಿಲ್ಲ. ಇದರಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡರು. ಪ್ರಕರಣ ಸುಖಾಂತ್ಯ ಕಂಡ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಕಚೇರಿಯಿಂದ ನಿರ್ಗಮಿಸಿದರು.
ಸಮುದಾಯದ ತಾಲೂಕು ಉಪಾಧ್ಯಕ್ಷ ನಾಣಿಕೆರೆ ತಿಮ್ಮಯ್ಯ, ಮುಖಂಡರಾದ ಗುಜ್ಜಲ ಶಿವರಾಮ್, ಗುಜ್ಜಲ ನಾಗರಾಜ, , ಚಂದ್ರಶೇಖರ್, ಜೆ.ವಸಂತ, ದೇವರಮನಿ ಶ್ರೀನಿವಾಸ, ತಾರಿಹಳ್ಳಿ ಹನುಮಂತಪ್ಪ, ಜಂಬಣ್ಣ, ವೆಂಕಟೇಶ್, ನಿಂಗಪ್ಪ, ಗುಜ್ಜಲ ರಘು, ಪೂಜಾರಿ ದುರುಗಪ್ಪ, ಗುಜ್ಜಲ ಉಮೇಶ ಇದ್ದರು.