ಹೊಸಪೇಟೆ: ನಗರದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಶೀಘ್ರದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ವಡಕರಾಯ ದೇವಾಲಯದಿಂದ ಆರಂಭಗೊAಡ ಮೆರವಣಿಗೆ ಪಾದಗಟ್ಟೆ ಆಂಜನೇಯ ದೇವಾಲಯ, ಮೇನ್ ಬಜಾರ, ಮಹಾತ್ಮ ಗಾಂಧಿ ವೃತ್ತ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಪುನೀತ್ ರಾಜಕುಮಾರ ವೃತ್ತದಿಂದ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ವಾರ್ಷಿಕ 5 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. 2015ರಲ್ಲೇ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಬಂದ್ ಮಾಡಲಾಗಿದೆ. ರೈತರು ಹಲವು ಬಾರಿ ಹೋರಾಟ ನಡೆಸಿ, ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದಕ್ಕೆ ಇದುವರೆಗೂ ಮುಂದಾಗುತ್ತಿಲ್ಲ. ಬರೀ ಭರವಸೆಗಳನ್ನೇ ನೀಡಲಾಗುತ್ತಿದೆ ಹೊರತು ರೈತರ ಬೇಡಿಕೆಗಳನ್ನು ಈಡೇರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಈ ಭಾಗದ ರೈತರು ಮೈಲಾರ ಮತ್ತು ದುಗ್ಗಾವತ್ತಿ, ಮುಂಡರಗಿ, ಸಿರುಗುಪ್ಪ ಈ ಪ್ರದೇಶಗಳಿಗೆ ಕಬ್ಬು ಸರಬರಾಜು ಮಾಡುವಂತಾಗಿದೆ. ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಣೆ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಇಲ್ಲೇ ಸ್ಥಾಪನೆಯಾದರೆ ಸಾಗಣೆ ವೆಚ್ಚದ ಹೊರೆ ಕಡಿಮೆ ಆಗಲಿದೆ. ಈ ಭಾಗದಲ್ಲಿ 5ಲಕ್ಷ ಟನ್ ಕಬ್ಬು ಬೆಳೆಯುವ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ತುಂಬಾ ಅನುಕೂಲವಾಗಲಿದೆ. ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದ್ದರಿಂದ ಕೂಡಲೇ ಸಂಬAಧಪಟ್ಟವರು ಸೂಕ್ತ ಸ್ಥಳವನ್ನು ಗುರುತಿಸಿ ಭೂಮಿ ಪೂಜೆ ಮಾಡಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.