ಹೊಸಪೇಟೆ: ರೈತರು ಒಕ್ಕಲುತನ ಮಾಡುವುದನ್ನು ಬಿಟ್ಟರೆ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗುತ್ತದೆ. ರೈತರು ಎಷ್ಟೇ ಸಮಸ್ಯೆಯಲ್ಲಿ ಇದ್ದರೂ ಕೃಷಿ ಕಾರ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಕೊರೋನಾ ಸಮಯದಲ್ಲಿ ಸಾಬೀತು ಮಾಡಿದ್ದಾರೆ ಎಂದು ಗರಗ ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ವಿರಕ್ತ ಮಠದ ಶ್ರೀ ಮನಿಪ್ರ ನಿರಂಜನಪ್ರಭು ಸ್ವಾಮೀಜಿ ನುಡಿದರು.
ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ರೈತ ಸಾಧಕರು ಮತ್ತು ರೈತರ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರೈತರನ್ನು ಎಲ್ಲರೂ ಗೌರವದಿಂದ ನಡೆಸಿಕೊಳ್ಳಬೇಕು. ಕೃಷಿಕರು ಎಂದರೇ ಸಾಕು, ಸಮಸ್ಯೆ ಸುಳಿಯಲಿ ಇದ್ದವರು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇಡೀ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ರೈತರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.
ಲಾಕ್‌ಡೌನ್ ವೇಳೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠಕ್ಕೆ ಸೇರಿದ ಎಂಟು ಎಕರೆ ಹೊಲದಲ್ಲಿ ನಾನು ಕೂಡ ಒಕ್ಕಲುತನ ಮಾಡಿರುವೆ. ಶ್ರೀಗಳು ನಮಗೆ ಮಾರ್ಗದರ್ಶನ ನೀಡಿ, ಕೃಷಿ ಮಾಡಲು ಪ್ರೇರಣೆ ನೀಡಿದರು. ರೈತರ ಕಷ್ಟ, ಕಾರ್ಪಣ್ಯಗಳು ನಮಗೆ ಗೊತ್ತಿದೆ. ಆದರೂ ಎದೆಗುಂದದೆ ಬಿತ್ತನೆ ಮಾಡುವ ಕಾಯಕವನ್ನು ಬಿಡಬಾರದು. ಇಡೀ ಜಗತ್ತಿಗೆ ಕಾಯಕದ ಮಹತ್ವ ತಿಳಿಸಿದ್ದೇ, ರೈತರು ಎಂಬುದನ್ನು ಮರೆಯಬಾರದು ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಐಎಎಸ್, ಐಪಿಎಸ್ ಅಧಿಕಾರಿಗಳ ಮೂಲ ಹುಡುಕುತ್ತಾ ಹೋದರೆ ಅವರು ರೈತರ ಮಕ್ಕಳೇ ಆಗಿರುತ್ತಾರೆ. ನಾನು ಒಂದು ವೇಳೆ, ಖಾಕಿ ಕಳಚಿದರೆ, ಕೃಷಿ ಕೆಲಸವೇ ಮಾಡಬೇಕಾಗುತ್ತದೆ. ಹಾಗಾಗಿ ರೈತರ ಬಗ್ಗೆ ನಾವೆಲ್ಲರೂ ಅಭಿಮಾನ ಹೊಂದೋಣ ಎಂದರು.
ಸAಘಟನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಎಪಿಎಂಸಿಗಳನ್ನು ನಡೆಸಿದರೆ, ರೈತರಿಗೆ ಮಧ್ಯವರ್ತಿಗಳಿಂದ ಆಗುವ ಮೋಸ ತಪ್ಪಲಿದೆ. ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರನ್ನು ಈ ಸಂಕಷ್ಟದಿAದ ಪಾರು ಮಾಡಬೇಕು ಎಂದರು.
ಸಾಧಕ ರೈತರು, ರೈತರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ನಗರದಲ್ಲಿ ರೈತ ದಿನಾಚರಣೆ ನಿಮಿತ್ತ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಂ ಷಾ ಚಾಲನೆ ನೀಡಿದರು.