ಜಿಲ್ಲೆ

ನಕಲಿ ವೈದ್ಯನ ಮೇಲೆ ದಾಳಿ

ಮಂಜುನಾಥ

ಹೊಸಪೇಟೆ: ತಾಲೂಕು ಕಮಲಾಪುರದಲ್ಲಿ ಡಿಎಚ್‌ಒ ಡಾ.ಶಂಕರ್ ನಾಯ್ಕ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯ ಅಸ್ಲಂ ಬಾಷಾ ಅವರ ಸಫಾ ಕ್ಲಿನಿಕ್ ಮೇಲೆ ಶನಿವಾರ ದಾಳಿ ನಡೆಸಿದರು.

ಕಮಲಾಪುರದ ಸಫಾ ಕ್ಲಿನಿಕ್‌ನ ನಕಲಿ ವೈದ್ಯ ಅಸ್ಲಂ ಬಾಷಾ ಎಂಬ ವ್ಯಕ್ತಿ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಅಧಾರದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸ್ಲಂ ಭಾಷಾ ಮತ್ತು ಅವರಿಗೆ ಆಶ್ರಯ ನೀಡಿದ ವಿಜಯನಗರ ಮೆಡಿಕಲ್ ಮಾಲೀಕ ಇಬ್ಬರು ಪರಾರಿ ಆಗಿದ್ದಾರೆ. ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಿದರೂ ಕರೆ ನಿರಾಕರಿಸಿದ್ದಾರೆ. ಕೂಡಲೇ ಸಫಾ ಕ್ಲಿನಿಕ್ ಅನ್ನು ಕೆಪಿಎಂಇ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕ್ಲಿನಿಕ್‌ಗೆ ಬೀಗ ಹಾಕಲಾಗಿದೆ. ಇದಕ್ಕೂ ಮುನ್ನ ತಪ್ಪು ಚಿಕಿತ್ಸೆ ಮೂಲಕ ತೊಂದರೆ ಒಳಗಾದ ಹಲವು ಜನರು ದೂರು ನೀಡಿದರು. ಆದರೂ, ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿಯ ಕ್ಲಿನಿಕ್‌ಗೆ ಮುಚ್ಚಿಸಲಾಗಿದೆ. ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಇದೇ ವೇಳೆ ಶ್ರೀ ಪದ್ಮ ಕ್ಲಿನಿಕ್ ನಡೆಸುತ್ತಿದ್ದ ಡಾ.ಸುಹಾಸ್ ಅವರು ಕೆಪಿಎಂಇ ನೊಂದಾಣಿ ಆಗದೇ ಹೋಮಿಯೋಪತಿ ವೈದ್ಯ ಪದ್ಧತಿಗೆ ಪರವಾನಗಿ ಪಡೆದು ಅಲೋಪಥಿ ಸೇವೆ ನೀಡುತ್ತಿರುವ ಹಿನ್ನಲೆಯಲ್ಲಿ ಇವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಪಟ್ಟಣದ ಇನ್ನೊಂದು ಸುಧಾ ಕ್ಲಿನಿಕ್ ಭೇಟಿ ನೀಡಿದಾಗ ಡಾ.ಮನೋಹರ್ ರವರ ಬಯೋಮೆಡಿಕಲ್ ವೇಸ್ಟ್ ಸರಿಯಾಗಿ ನಿರ್ವಹಿಸದೇ ಇರುವ ಹಿನ್ನಲೆಯಲ್ಲಿ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಂಕರನಾಯ್ಕ ತಿಳಿಸಿದ್ದಾರೆ.