ಹೊಸಪೇಟೆ: ನಗರದಲ್ಲಿ ಸಂಚರಿಸುತ್ತಿರುವ ನಕಲಿ ಆ್ಯಂಬುಲೆನ್ಸ್ ವಾಹನದ ವಿರುದ್ಧ ಕ್ರಮಕೈಗೊಳ್ಳಿ ಎಂದು ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘದ ವತಿಯಿಂದ ಎಎಸ್ಪಿ ಸಲೀಂ ಪಾಷಾ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲೆಯ (ಗೂಡ್ಸ್ ವಾಹನ) ನಕಲಿ ಆ್ಯಂಬುಲೆನ್ಸ್ ವಾಹನ ಸೆ.25 ರಂದು ನಗರದಲ್ಲಿರುವ ಖಾಸಗಿ ಆಸ್ಪತ್ರೆಯಿಂದ ರೋಗಿಯನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡುವಾಗ ರಾತ್ರಿ 8 ಗಂಟೆ ಸುಮಾರಿಗೆ ಹೊಸಪೇಟೆಯ ಸಾಯಿಬಾಬಾ ಸರ್ಕಲ್‌ನಲ್ಲಿರುವ ಬ್ಯಾರಿಕೇಡ್‌ಗಳಿಗೆ ಅಪಘಾತ ಮಾಡಿದೆ. ಅಪಘಾತದ ತೀವ್ರತೆಗೆ ವಾಹನವು ಸ್ಥಳÀದಲ್ಲಿ ಕೆಟ್ಟು ನಿಂತಿದೆ. ಈ ಸಂದರ್ಭದಲ್ಲಿ ನಕಲಿ ಆ್ಯಂಬುಲೆನ್ಸ್ ವಾಹನದ ಚಾಲಕ ಕೊಪ್ಪಳದ ನವೀದ್ ಎಂಬ ವ್ಯಕ್ತಿಯು ಸ್ಥಳೀಯ ಆ್ಯಂಬುಲೆನ್ಸ್ ಚಾಲಕರಿಗೆ ಫೋನ್ ಸಂಪರ್ಕ ಮಾಡಿ ಬೇರೆಂದು ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.
ಅಪಘಾತಕ್ಕೀಡಾದ (ಗೂಡ್ಸ್ ವಾಹನ) ನಕಲಿ ಆ್ಯಂಬುಲೆನ್ಸ್ ವಾಹನವನ್ನು ಅಪಘಾತದ ಸ್ಥಳದಿಂದ ಯಾರ ಗಮನಕ್ಕೂ ಬಾರದಂತೇ ಹತ್ತಿರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರ ತನಕ ತೆಗೆದುಕೊಂಡು ಹೋಗಿ ಗ್ಯಾರೇಜ್ ಒಂದರಲ್ಲಿ ಬಿಟ್ಟು ಹೋಗಿದ್ದಾರೆ. ಗೂಡ್ಸ್ ವಾಹನವನ್ನು ಆ್ಯಂಬುಲೆನ್ಸ್ ವಾಹನವನ್ನಾಗಿ ಪರಿವರ್ತಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆಗೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ವಾಹನ ಚಾಲಕ ಮತ್ತು ಮಾಲೀಕನ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣವೇ ಈ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.