ಹೊಸಪೇಟೆ: ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಸೀಸೆರಿಯನ್ ಹೆಚ್ಚಾಗುತ್ತಿದೆ. ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾ ಮತ್ತು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಶನುವಾರ ನಡೆದ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಆರೋಗ್ಯ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ ಅಂದಾಜು 24 ಸಾವಿರ ಹೆರಿಗೆಗಳು ಆಗುತ್ತಿದೆ. ಈ ಪೈಕಿ ಅಂದಾಜು 12 ಸಾವಿರ ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಉಳಿದ 12 ಸಾವಿರ ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗಿವೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೀಜರಿನ್ ಪ್ರಮಾಣ ಶೇ.83 ರಷ್ಠಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.46 ರಷ್ಟಿದ್ದು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಿಜರಿಯನ್ ಪ್ರಮಾಣ ಶೇ.100 ರಷ್ಟು ಕಂಡು ಬಂದಿದೆ. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ತಕ್ಷಣವೇ ಶೇ.75 ಕ್ಕಿಂತ ಹೆಚ್ಚು ಸಿಜರಿಯನ್ ಪ್ರಮಾಣವಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ 15 ದಿನಗಳೊಳಗಾಗಿ ವರದಿ ನೀಡ ಬೇಕು ಎಂದು ಸೂಚನೆ ನೀಡಿದರು.
ಕಾರ್ಯಗಾರದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಯಾವ ಕಾರಣಗಳಿಗಾಗಿ ಸಿಜರಿಯನ್ ಪ್ರಮಾಣ ಹೆಚ್ಚಾಗಿರುವುದಕ್ಕೆ ಕಾರಣಗಳನ್ನು ನೀಡಲು ಮತ್ತು ಸಾಮಾನ್ಯ ಹೆರಿಗೆಯಾಗುವಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಗರ್ಭಿಣಿ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಅನಾವಶ್ಯಕವಾಗಿ ಸಿಜರಿಯನ್ ಹೆರಿಗೆಗಳು ನಡೆಯುತ್ತಿದ್ದಲ್ಲಿ ಸಂಪೂರ್ಣ ವರದಿಯೊಂದಿಗೆ ನಿಯಮಾನುಸಾರ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದರು.
ಡಿ.ಎಚ್.ಒ. ಡಾ.ಎಲ್.ಅರ್.ಶಂಕರ್ ನಾಯ್ಕ್, ಅರ್ ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಖಾಸಗಿ ಆಸ್ಪತ್ರೆ ವೈದ್ಯರಾದ.ಡಾ.ಹೇಮಾವತಿ, ಎಂ.ಟಿ.ಪಿ. ರಾಜ್ಯ ಸಂಯೋಜಕ ಎಂಪಿ. ದೊಡ್ಡನಗೌಡ. ವಿಷಯ ನಿರ್ವಾಹಕ ಎಂ.ಧರ್ಮನಗೌಡ ಇತರರಿದ್ದರು.