ಹೊಸಪೇಟೆ: ವಿದ್ಯುತ್ ಖಾಸಗೀಕರಣ ಮಸೂದೆ ಮಂಡನೆ ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ನಗರದ ತಹಸಿಲ್ ಕಚೇರಿ ಎದುರು ಮಂಗಳವಾರ ಕೆಲಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ಖಾಸಗೀಕರಣ ಕಾಯ್ದೆ ತರಲು ಮುಂದಾದಾಗ ರೈತರು ಮತ್ತು ಜನರು ವಿರೋಧಿಸಿದ್ದರಿಂದ ಹಿಂದೆ ಸರಿದಿದ್ದು ಇತಿಹಾಸ. ಮತ್ತೊಮ್ಮೆ ಅದೇ ರೀತಿಯ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ. ವಿದ್ಯುತ್ ಖಾಸಗೀಕರಣ ಬಿಲ್ ಒಮ್ಮೆ ಪಾಸಾದರೆ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಪ್ರಿಪೇಯ್ಡಿ ಸ್ಮಾರ್ಟ್ ಮೀಟರ್‌ಗಳು ಬೀಳಲಿವೆ. ಸರ್ಕಾರದ ಯೋಜನೆಗಳಾದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕುಡಿವ ನೀರಿನ ಯೋಜನೆಗಳ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದರಿಂದ ರೈತರಿಗೆ ತುಂಬ ನಷ್ಟವಾಗಲಿದೆ. ರೈತರು ತಿಂಗಳಿಗೆ 20-30 ಸಾವಿರ ರೂ. ವಿದ್ಯುತ್ ಬಿಲ್ ಕಟ್ಟಲಾಗದೆ, ವಿದ್ಯುತ್ ಕಂಪನಿಗಳ ಕಾಟಕ್ಕೆ ಹೆದರಿ ಸಾವಿನ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರ ವಿದ್ಯುತ್ ಖಾಸಗೀಕರಣ ಕಾಯ್ದೆ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.
ನಂತರ ತಹಸೀಲ್ದಾರ್ ಎಚ್.ವಿಶ್ವನಾಥ್‌ಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪದಾಧಿಕಾರಿಗಳಾದ ರೇವಣ ಸಿದ್ದಪ್ಪ, ರಾಘವೇಂದ್ರ, ಎಲ್.ಎಸ್.ರುದ್ರಪ್ಪ, ಕಂಬಳಿ ಸುರೇಶ್, ಮಲ್ಲಿಕಾರ್ಜುನ, ಹೂಗಾರ್ ಬಸವ, ವಣಗಿ ಕೃಷ್ಣ ಇದ್ದರು.