ಹೊಸಪೇಟೆ : ಚುನಾವಣಾ ಆಯೋಗದ ನಿರ್ಲಜ್ಜ ಪಕ್ಷಪಾತ ಹಾಗೂ ಬಿಜೆಪಿ ಪಕ್ಷದ ಸರ್ವಾಧಿಕಾರಿ ನಡತೆಯ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶದ ಬಗ್ಗೆ ತೀವ್ರ ಆತಂಕಯಿದೆ ಎಂದು ಎದ್ದೇಳು ಕರ್ನಾಟಕದ ಸಂಚಾಲಕ ನಿಂಬಗಲ್ ರಾಮಕೃಷ್ಣ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 10 ವರ್ಷದ ಆಳ್ವಿಕೆ ನಡೆಸಿದ ಬಿಜೆಪಿ ಕೊಟ್ಟ ಮಾತನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ. ಮತಗಳನ್ನು ಪಡೆಯಲು ಧಾರ್ಮಿಕ ದ್ವೇಷ ಮತ್ತು ಸುಳ್ಳು ಸುದ್ದಿಗಳನ್ನು ಪ್ರಚಾರಿಸುತ್ತದೆ. ದೇಶದಾದ್ಯಂತ ಜನಪರ ಸಂಘಟನೆಗಳು ಹಾಗೂ ನಾಗರೀಕ ರಾಜಕೀಯ ವೇದಿಕೆಗಳು ಬಿಜೆಪಿಯನ್ನು ಸೋಲಿಸಲು ಅವಿರತವಾಗಿ ಶ್ರಮಿಸಿವೆ. ವಿರೋಧ ಪಕ್ಷಗಳೂ ತಕ್ಕಮಟ್ಟಿಗೆ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಗೊಂಡಿವೆ. ಜನರ ಬದುಕಿಗೆ ಒಂದಷ್ಟು ಆಸರೆಯಾಗುವಂತಹ ಗ್ಯಾರಂಟಿಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಸೋಲಿನ ಕಡೆ ನಿಚ್ಚಳವಾಗಿ ಮುಖ ಮಾಡಿದೆ. ಆದರೆ ಅದು ಸೋಲನ್ನು ಒಪ್ಪಿಕೊಂಡು ಅಧಿಕಾರ ಹಸ್ತಾಂತರಿಸುವುದಿಲ್ಲ ಎಂಬ ಆತಂಕ ನಾಗರೀಕ ಸಮಾಜವನ್ನು ಕಾಡುತ್ತಿದೆ ಆತಂಕ ವ್ಯಕ್ತಪಡಿಸಿದರು.
ಈ ಬಾರಿ ದೇಶದಲ್ಲಿ ಬಿಜೆಪಿ ಸೋಲುತ್ತದೆ. ಆದರೆ ಸುಲಭವಾಗಿ ಅಧಿಕಾರ ಹಸ್ತಾಂತರಿಸುವುದಿಲ್ಲ. ಮತ ಎಣಿಕೆಯಲ್ಲಿ ಮೋಸದ, ಜನಾದೇಶದ ಉಲ್ಲಂಘಟನೆಯ ಹಾಗೂ ಕುದುರೆ ವ್ಯಾಪಾರದ ಸಾಧ್ಯತೆಯಿದೆ. ಜನಾಭಿಪ್ರಾಯವನ್ನು ರಕ್ಷಿಸಿಕೊಳ್ಳಲು ಜನಸಂಘಟನೆಗಳು ಮುಂದಾಗಲೇಬೇಕು. ನಿಷ್ಪಕ್ಷಪಾತ ಮತ ಎಣಿಕೆ ನಡೆಯುವಂತೆ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಣ್ಣದ ಮನೆ ಸೋಮಶೇಖರ್, ಮೊಹಮ್ಮದ್ ಅಬ್ದುಲ್ ರಫೀಕ್, ಜೆ.ಶಿವಕುಮಾರ್, ಸರ್ದಾರ್ ಬಾರಿಗಿಡರ್, ಬಸರಾಜ್, ವೀರಣ್ಣ ಇತರರಿದ್ದರು.