ಜಿಲ್ಲೆ

ಮಳೆ ಸಿಂಚನದಿಂದ ತಣ್ಣಗಾದ ಇಳೆ

ಮಂಜುನಾಥ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗುಡುಗು-ಮಿಂಚು ಹಾಗೂ ಗಾಳಿ ಸಹಿತವಾಗಿ ಬುಧವಾರ ತಡವಾಗಿ ಮಳೆಯಾಗಿದೆ. ಬಿಸಿಲಿಗೆ ಕಾದಿದ್ದ ಧರೆಯು ಮಳೆ ಸಿಂಚನದಿಂದ ತಣ್ಣಗಾಯಿತು.

ಹೊಸಪೇಟೆ, ಮರಿಯಮ್ಮನಹಳ್ಳಿ ಹಾಗೂ ಕಮಲಾಪುರ‌ ಹೋಬಳಿಯಲ್ಲಿ  ಎರಡು ಗಂಟೆಗೂ ಅಧಿಕ ಗಾಳಿ, ಗುಡಗು ಸಹಿತ ಧಾರಾಕಾರ ಮಳೆ ಸುರಿಯಿತು. ಕೆಲದಿನಗಳಿಂದ ಬಿಸಿಲ ಧಗೆ ಮಿತಿ ಮೀರಿತ್ತು. ಉಷ್ಣಾಂಶವು 41 ಡಿಗ್ರಿ ತಲುಪಿತ್ತು. ಹಗಲಲ್ಲಿ ಹೊರಗಡೆ ಓಡಾಡಲಾಗದಷ್ಟು ಬಿಸಿ ಇತ್ತು. ಬೆಳಿಗ್ಗೆಯಿಂದಲೂ ಗಾಳಿ ಜತೆಗೆ ಬಿಸಿ ಗಾಳಿ ಬೀಸುವ ಜತೆಗೆ ಮಳೆ ಮುನ್ಸೂಚನೆ ನೀಡಿತ್ತು. ಅದರಂತೆ ಬುಧವಾರ ರಾತ್ರಿ ಮಳೆರಾಯ ಕೃಪೆ ತೋರಿದ್ದು, ಜಿಲ್ಲೆಯಲ್ಲಿ 11.1 ಮಿಮೀ ಮಳೆಯಾಗಿದೆ.

ಮಳೆಯ ಸಿಂಚನವು ಜನರಲ್ಲಿ ಹರ್ಷ ತಂದಿತು. ವರ್ಷಾಂತ್ಯದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಮಳೆಗಾಗಿ ಕೆಲವೆಡೆ ರೈತರು ವಿಶೇಷ ಪೂಜೆ ಸಹ ನಡೆಸಿದ್ದರು. ವಾಡಿಕೆಯಂತೆ ಯುಗಾದಿ ಹಬ್ಬದಂದು ಪ್ರತಿ ವರ್ಷ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು.  ಈ ಬಾರಿ‌ ಕೂಡ ವಾಡಿಕೆಯಂತೆ ಮಳೆಯಾಗಿದೆ. ಬಹಳ ದಿನಗಳ ನಂತರ ಬುಧವಾರ ರಾತ್ರಿ ವರುಣನ ಕೃಪೆಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ರಸ್ತೆಯ ತಗ್ಗು ಮತ್ತು ಗುಂಡಿಗಳಲ್ಲಿ ಕೆಲ ಹೊತ್ತು ನೀರು ನಿಂತಿತು.

ಹೊಸಪೇಟೆಯಲ್ಲಿ 8.1 ಮಿಮೀ ಮಳೆಯಾಗಿದೆ.  ಹಗರಿಬೊಮ್ಮನಹಳ್ಳಿ 14.6 ಮಿಮೀ, ಹೂವಿನಹಡಗಲಿ 7.8 ಮಿಮೀ, ಹರಪನಹಳ್ಳಿ 9.7 ಮಿಮೀ, ಕೊಟ್ಟರು 12.8 ಮಿಮೀ, ಕುಡ್ಲಿಗಿ 15.7 ಮಿಮೀ, ಒಟ್ಟು ಜಿಲ್ಲೆಯಲ್ಲಿ 11.1 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಕಳಚಿದ ಕಳಸ

ಗುಡುಗು ಸಹಿತ ಸುರಿದ ಮಳೆಗೆ ನಗರದ ಶ್ರೀ ಮಾರ್ಕoಡೇಶ್ವರ ದೇಗುಲದ ಗೋಪುರದ ಕಳಸ ಕಳಚಿ ಬಿದ್ದಿದೆ. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ತಾಲೂಕಿನ ಹೊಸೂರು ಭಾಗ ಸೇರಿದಂತೆ ವಿವಿಧೆಡೆ 25 ಎಕರೆಗೂ ಹೆಚ್ಚಿ ಬಾಳೆ ಗಿಡಗಳು ಬಾಳೆಗಿಡಗಳು ಮುರಿದು ಬಿದ್ದಿದೆ. ಇನ್ನು ಇತರೆ ಕಡೆ ವಿದ್ಯುತ್ ಕಂಬಗಳು ಮುರಿದು ಹೋಗಿದ್ದು ಕರೆಂಟ್ ಇಲ್ಲದೇ ಜನರು ಪರದಾಡುವ ಸ್ಥಿತಿ‌ ನಿರ್ಮಾಣವಾಗಿತ್ತು.