ಜಿಲ್ಲೆ

ಪಟಾಕಿ ಅಪಘಾತಗಳಾಗದಂತೆ ಎಚ್ಚರ ವಹಿಸಿ

ಮಂಜುನಾಥ

ಹೊಸಪೇಟೆ: ಸರ್ಕಾರದ ಆದೇಶದಂತೆ ಜನನಿಬೀಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧಿಸಲಾಗಿದ್ದು, ಅಧಿಕಾರಿಗಳು ಅಪಘಾತಗಳಾಗದಂತೆ ಎಚ್ಚರ ವಹಿಸಿಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟ ಪರವಾನಿಗೆ ನೀಡುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಹಸೀಲ್ದಾರ್, ಅಗ್ನಿ ಶಾಮಕ ಅಧಿಕಾರಿ, ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಗಳು, ಜಿಲ್ಲಾ ಪರಿಸರ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು ಹಾಗೂ ಇನ್ನಿತರನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿದ್ದು, ಅವರು ಪ್ರತಿ ತಾಲೂಕಿನಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರ ವಹಿಸಬೇಕು.

ಪಟಾಕಿ ಮಾರಾಟ ಮಾಡಲು ಪರವಾನಗಿ ನೀಡುವ ಮೊದಲು ದಾಖಲೆ ಪರಿಶೀಲಿಸಿ ಪರವಾನಿಗೆ ನೀಡಬೇಕು. ಕಡ್ಡಾಯವಾಗಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಬೇಕು. ಸರ್ಕಾರದ ಅದೇಶದಂತೆ ಪ್ರತಿ ಮಳಿಗೆಗಳಿಗೆ ಜಿಎಸ್‌ಟಿ ಕಡ್ಡಾಯಗೊಳಿಸಿದೆ‌. ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಲು ಸುಲಭವಾಗುತ್ತದೆ ಎಂದರು.

ಮಳಿಗೆಗಳಲ್ಲಿ 9 ಲೀಟರ್ ಸಾಮರ್ಥ್ಯದ ಒಂದು ವಾಟರ್ ಪ್ರೆಜರ್ ಮಾದರಿ ಆಗ್ನಿನಂದಕ ಹಾಗೂ ಪ್ರತ್ಯೇಕ ಎರಡು ಬಕೆಟ್‌ಗಳಲ್ಲಿ ನೀರು, ಮಣ್ಣು ತುಂಬಿಟ್ಟಿರಬೇಕು. ಮಳಿಗೆ ಪಕ್ಕದಲ್ಲಿ ಎರಡು ಡ್ರಮ್‌ಗಳಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು. ಮಳಿಗೆಯಲ್ಲಿ ಅಡುಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು. ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದು ಎಂದು ಮುನ್ನೆಚ್ಚರಿಕೆ ನೀಡಿದರು.