ಜಿಲ್ಲೆ

ಪ್ರಾಣ, ಆಸ್ತಿ ಹಾನಿಗಳಿಗೆ ಪರಿಹಾರ ಪಾವತಿ

ಹೊಸಪೇಟೆ: ಜಿಲ್ಲೆಯಲ್ಲಿ ಜೂ.01ರಿಂದ ಇಲ್ಲಿಯ ವರೆಗೆ ಆಸ್ತಿ ಹಾಗೂ ಪ್ರಾಣ ಹಾನಿಗಳಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್.ದಿವಾಕರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ 230 ಮನೆಗಳಲ್ಲಿ 126 ಮನೆಗಳಿಗೆ ನಿಯಮಾನುಸಾರ ಸಮೀಕ್ಷೆ ಮಾಡಿ ಪರಿಹಾರ ಧನ ಪಾವತಿಸಲಾಗಿದೆ. ಇನ್ನು 104 ಮನೆಗಳ ಪರಿಹಾರ ಶೀಘ್ರದಲ್ಲಿ ಪರಿಹಾರ ಪಾವತಿಸಲಾಗುವುದುತ್ತದೆ. ಹೊಸಪೇಟೆ ತಾಲೂಕಿನಲ್ಲಿ 24 ಮನೆಗಳು, ಹಗರಿಬೊಮ್ಮನಹಳ್ಳಿ 26, ಕೂಡ್ಲಿಗಿ 81, ಹರಪನಹಳ್ಳಿ 32, ಹೂವಿನ ಹಡಗಲಿ 30 ಮತ್ತು ಕೊಟ್ಟೂರು ತಾಲೂಕಿನಲ್ಲಿ 37 ಸೇರಿ ಒಟ್ಟು 230 ಮನೆಗಳಿಗೆ ಹಾನಿಯಾಗಿದೆ. ಹರಪನಹಳ್ಳಿ, ಕೂಡಿಗಿ ಮತ್ತು ಹೂವಿನ ಹಡಗಲಿ ತಾಲೂಕಿನಲ್ಲಿ ತಲಾ ಒಂದು ದೊಡ್ಡ ಜಾನುವಾರುಗಳ ಪ್ರಾಣಹಾನಿಯಾಗಿದೆ. ಇನ್ನೂ ಬೆಳೆ ಹಾನಿಯಾದ ರೈತರಿಗೆ ಶೀಘ್ರದಲ್ಲಿ ಪರಿಹಾರ ಪಾವತಿಸಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಅತೀ ಹೆಚ್ಚು ಮಳೆ:

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಜೂ.01ರಿಂದ ಇಲ್ಲಿಯ ವರೆಗೆ 237 ಮಿ.ಮೀ. ವಾಡಿಕೆ ಮಳೆಗೆ 354 ಮಿ.ಮೀ. ಮಳೆ ಆಗಿದೆ. ಶೇ.49ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಕೊಟ್ಟೂರು ತಾಲೂಕಿನಲ್ಲಿ ಶೇ.138 ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ ಶೇ.145 ರಷ್ಟು ಅತಿ ಹೆಚ್ಚು ಮಳೆ ಆಗಿದೆ.

ಪೂರ್ವ ಮುಂಗಾರಿನಲ್ಲಿ ಒಟ್ಟು 186.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಕಾರ್ಯವು ಪೂರ್ಣಗೊಂಡಿದ್ದು, ರೈತರ ದಾಖಲೆಗಳನ್ನು ಪರಿಹಾರ ತಂತ್ರಾAಶದಲ್ಲಿ ಗಣಕೀಕರಣಗೊಳಿಸಲಾಗಿರುತ್ತದೆ. ಸರ್ಕಾರದಿಂದ ಶೀಘ್ರದಲ್ಲಿ ಪರಿಹಾರ ಜಮಾ ಮಾಡಲಾಗುವುದು. ಮುಂಗಾರಿನಲ್ಲಿ ಜಂಟಿ ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದ್ದು, ಹಾನಿಯಾದ ಬೆಳೆಗಳ ಪಟ್ಟಿಯನ್ನು ತಯಾರಿಸಿ ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶೇ.100ರಷ್ಟು ಬಿತ್ತನೆ:

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.100 ರಷ್ಟು ಬಿತ್ತನೆಯಾಗಿದೆ. 2,94,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಪ್ರಮುಖ ಬೆಳೆಗಳು ಮುಸುಕಿನ ಜೋಳ, ಶೇಂಗಾ, ಭತ್ತ, ಜೋಳ, ಸಜ್ಜೆ, ತೊಗರಿ ಮತ್ತು ರಾಗಿ ಬೆಳೆಗಳು ಬಿತ್ತನೆಯಾಗಿದೆ. ಹಾಗೂ ತೋಟಗಾರಿಕಾ ಪ್ರದೇಶದಲ್ಲಿ 4795 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, ಟಮೊಟೋ, ಈರುಳ್ಳಿ, ಬದನೆ ಸೇರಿದಂತೆ ಇತರೆ ಬೆಳೆಗಳು ಸಹ ಬಿತ್ತನೆಯಾಗಿರುತ್ತವೆ.

ಬೆಳೆ ಹಾನಿ:

ಮಳೆಯಿಂದಾಗಿ ಇಲ್ಲಿಯ ವರೆಗೆ 309.35 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿವೆ. ಪ್ರಮಖವಾಗಿ ಮುಸುಕಿನ ಜೋಳ 136.29 ಹೆಕ್ಟೇರ್, ಭತ್ತ 118.71 ಹೆಕ್ಟೇರ್, ಹತ್ತಿ 21.1 ಹೆಕ್ಟೇರ್, ಸೂರ್ಯಕಾಂತಿ 11.3 ಹೆಕ್ಟೇರ್, ಜೋಳ 8.14 ಹೆಕ್ಟೇರ್, ಸಜ್ಜೆ 6.88 ಹೆಕ್ಟೇರ್, ಕಬ್ಬು 2.23 ಹೆಕ್ಟೇರ್, ರಾಗಿ 3.2 ಹೆಕ್ಟೇರ್, ಶೇಂಗಾ 1.1 ಹೆಕ್ಟೇರ್ ಮತ್ತು ಹೆಸರು 0.4 ಹೆಕ್ಟೇರ್ ನಷ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಇನ್ನೂ 90.93 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಇವುಗಳ ಪೈಕಿ ಮೆಣಸಿನಕಾಯಿ 32.4 ಹೆಕ್ಟೇರ್, ಈರುಳ್ಳಿ 23.1 ಹೆಕ್ಟೇರ್, ಪಪ್ಪಾಯ 3.2 ಹೆಕ್ಟೇರ್, ಬಾಳೆ 5.8 ಹೆಕ್ಟೇರ್, ಟಮೊಟೋ 4.8 ಹೆಕ್ಟೇರ್, ಹಾಗಲಕಾಯಿ 5.8 ಹೆಕ್ಟೇರ್, ಕುಂಬಳ ಕಾಯಿ 1.8 ಹೆಕ್ಟೇರ್, ನುಗ್ಗೇ 5.2 ಹೆಕ್ಟೇರ್, ವಿಳ್ಲೇದೆಲೆ 2.73 ಹೆಕ್ಟೇರ್, ಗುಲಾಬಿ 3.5 ಹೆಕ್ಟೇರ್, ಸುಗಂಧರಾಜ 1.2 ಹೆಕ್ಟೇರ್, ಅಡಿಕೆ 0.8 ಹೆಕ್ಟೇರ್, ಹಿರೇಕಾಯಿ 0.8 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ ಎಂದು ತಿಳಿಸಿದ್ದಾರೆ.