ಹೊಸಪೇಟೆ : ನಿಂತ ನೀರಿನ ತಾಣಗಳಲ್ಲಿ ಸೊಳ್ಳೆ ಸಾಂದ್ರತೆ ಹೆಚ್ಚಾಗುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರಲ್ಲಿ ಅರಿವು ಅಗತ್ಯ ಎಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಿಂದ ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪತ್ರಕರ್ತರರಿಗೆ ಜಾಗೃತಿ ಕಾರ್ಯಗಾರದಲ್ಲಿ ಮಾತನಾಡಿದರು.
ಸರ್ಕಾರದ ಮಹತ್ತರ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಲು ಪತ್ರಕರ್ತರಿಂದ ಸಾದ್ಯ. ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ರೋಗದ ಜಾಗೃತಿ ಬಗ್ಗೆ ಪ್ರತಿಮನೆ ಮನೆಗೂ ಮಾಹಿತಿ ತಲುಪಿಸುವ ಜವಾಬ್ದಾರಿ ನಿಮ್ಮಗಳ ಮೇಲಿದ್ದು ಎಲ್ಲರು ಸಹಕಾರ ನೀಡ ಬೇಕು ಎಂದರು.
ಜಿಲ್ಲಾ ಆರ್.ಸಿ.ಎಚ್. ಜಂಬಯ್ಯನಾಯಕ ಮಾತನಾಡಿ, ಸಮಾಜದ ಆರೋಗ್ಯಕ್ಕೆ ಸಾಂಕ್ರಾಮಿಕ ರೋಗಗಳ ಜಾಗೃತಿ ಅವಶ್ಯವಾಗಿದೆ. ಕೀಟಜನ್ಯ ರೋಗಗಳ ನಿಯಂತ್ರಣ ಸಮುದಾಯದ ಸಹಕಾರದಿಂದ ಮಾತ್ರ ಸಾದ್ಯ. ಎಲ್ಲರೂ ಸೊಳ್ಳಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸಬೇಕು. ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ, ಎಳನೀರು ಚಿಪ್ಪು, ಟೈರ್‌ಗಳಲ್ಲಿ ನೀರು ನಿಂತು ಸೊಳ್ಳೆ ಹುಟ್ಟಲು ಕಾರಣವಾಗಿವೆ. 2025ರ ವೇಳೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮಲೇರಿಯಾ ರೋಗದ ನಿವಾರಣಾ ಗುರಿಯನ್ನು ಸಾಧಿಸುವ ಉದ್ದೇಶದಿಂದ ಎಲ್ಲಾ ಹಂತಗಳಲ್ಲಿಯೂ ಪರಿಣಾಮಕಾರಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ್ದು, ಕೆಲ ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಇನ್ನೂ ಉಳಿದ ರೋಗಳ ಜಾಗೃತಿಗೆ ಪತ್ರಕರ್ತ ಪಾತ್ರ ಅಗತ್ಯವಾಗಿದೆ ಎಂದರು. ವೈದ್ಯಾಧಿಕಾರಿ ಬಸವರಾಜ್ ರೋಗವಾಹಕ ಆಶ್ರಿತ ರೋಗಗಳ ಮಾಹಿತಿ ನೀಡಿದರು. ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ರಾಧಿಕಾ, ಕ್ಷಯರೋಗ ನಿರ್ಮೂಲನ ಆದಿಕಾರಿ ಡಾ.ಜಗದೀಶ್ ಪಾಟ್ನೆ, ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಟಿಎಚ್ ಒ ಭಾಸ್ಕರ್, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ, ಆರೋಗ್ಯ ನಿರೀಕ್ಷ ಧರ್ಮನಗೌಡ ಇತರರಿದ್ದರು.