ಜಿಲ್ಲೆ

ಜಿಲ್ಲಾಧಿಕಾರಿಯಾಗಿ ಕವಿತಾ ಮನ್ನಿಕೇರಿ ಅಧಿಕಾರ ಸ್ವೀಕರ

ಮಂಜುನಾಥ

ಹೊಸಪೇಟೆ: ವಿಜಯನಗರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್.ಮನ್ನಿಕೇರಿ ಬುಧವಾರ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಂದ ಅಧಿಕಾರ ಸ್ವೀಕರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ವಿಜಯನಗರ ಜಿಲ್ಲೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಎಲ್ಲ ಇಲಾಖೆಗಳ ಕಚೇರಿಗಳು ಸೃಜನೆಗೊಂಡಿಲ್ಲ. ಹಂತ ಹಂತವಾಗಿ ಎಲ್ಲ ಇಲಾಖೆಗಳನ್ನು ಇಲ್ಲಿಗೆ ತರುವ ಪ್ರಯತ್ನ ಮಾಡಲಾಗುವುದು. ರಸ್ತೆ, ಕುಡಿವ ನೀರು, ಆರೋಗ್ಯಕ್ಕೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಆದ್ಯತೆಯ ಮೇಲೆ ಏನೇನು ಕೆಲಸಗಳು ಆಗಬೇಕು ಎಂಬುದನ್ನು ತಿಳಿದುಕೊಂಡು, ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದರು.

ಅಧಿಕಾರ ವಹಿಸಿದ ನಂತರ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಕರೆ ಮೂಲಕ ಮಾಡಿದ ಕರ್ತವ್ಯಕ್ಕೆ ಹಾಜರಾಗಿದ್ದನ್ನು ತಿಳಿಸಿದರು. ಸಚಿವರು ಶುಭ ಕೋರಿದರು. ಅದಕ್ಕೂ ಮುನ್ನ ವೈಕುಂಠ ಅತಿಥಿಗೃಹದಲ್ಲಿ ತಂಗಿದ್ದ ಜಿಲ್ಲಾಧಿಕಾರಿ ಕವಿತಾ ಅವರು ಅಧಿಕಾರ ವಹಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬರುವುದಕ್ಕೆ ಮೊದಲಾಗಿ ನಗರದ ವಿನಾಯಕ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ವಿಜಯನಗರ ನೂತನ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ನಂತರ ಸ್ವಂತ ಕಾರಿನಲ್ಲಿ ಮನೆಗೆ ಹೊರಟು ಹೋದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಮಳ್ಳಪ್ಪಗೌಡ್ರ್ ಇತರರಿದ್ದರು.