ಹೊಸಪೇಟೆ: ಕ್ರಸ್ಟ್ಗೇಟ್ ಅಳವಡಿಕೆ ವಿಳಂಬ ಖಂಡಿಸಿ ಪಕ್ಷಾತೀತ ಹೋರಾಟ ಸಮಿತಿಯಿಂದ ನಗರದ ತುಂಗಭದ್ರಾ ಜಲಾಶಯ ಆವರಣದಲ್ಲಿ ಸೋಮವಾರ ಪ್ರತಿಭಟನಾ ಸಮಾವೇಶ ನಡೆಯಿತು.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ಕೊಚ್ಚಿ ಹೋಗಿ ವರ್ಷ ಕಳೆದರೂ ಕಾಮಗಾರಿ ಮಾತ್ರ ಮಂದಗತಿಯಾಗಿ ಸಾಗಿದೆ. ರೈತರು ಯಾವುದೇ ಕಾರಣಕ್ಕೂ ಎರಡನೇ ಬೆಳೆ ಕಳೆದುಕೊಳ್ಳಲು ತಯಾರಿಲ್ಲ. ಈ ವರ್ಷ ಮಳೆ ಚೆನ್ನಾಗಿ ಆಗಿದೆ. ಒಳ ಹರಿವು ಉತ್ತಮವಿದೆ. ಬೇಸಿಗೆ ಬೆಳೆಯನ್ನು ಬೆಳೆಯದಿದ್ದರೆ ಸಾವಿರಾರು ಕೋಟಿ ರೂ. ನಷ್ಟವಾಗುತ್ತದೆ. ರೈಸ್ ಮಿಲ್ಲುಗಳು, ಕೃಷಿ ಕೂಲಿಕಾರರು, ಹಮಾಲಿ, ಚಾಲಕರು ಕೆಲಸವಿಲ್ಲದೆ ಗುಳೆ ಹೋಗಬೇಕಾಗುತ್ತದೆ. ಹೈನುಗಾರಿಕೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. 19ನೇ ಕ್ರಸ್ಟ್ಗೇಟ್ ಜತೆನ ಹಾನಿಗೊಳಗಾದ ಉಳಿದ 06 ಗೇಟ್ ಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಟಿಬಿಡ್ಯಾಂ ವಿಚಾರದಲ್ಲಿ ಸರ್ಕಾರ ನಿರ್ಲಕ್ಷö್ಯ ತೋರುತ್ತಿದೆ. ಈ ಬಾರಿ ನವೆಂಬರ್‌ನಲ್ಲಿ ಭತ್ತ ಕಟಾವು ಆಗಲಿದೆ. ಎರಡನೇ ಬೆಳೆಗೆ ನೀರು ಸಿಗಲಿದೆ. ಇನ್ನೂ 40 ಟಿಎಂಸಿ ನೀರು ಇಳಿದಾಗ ಗೇಟ್ ಅಳವಡಿಕೆ ಕಾರ್ಯ್ ನಡೆಯಲಿ. ಅನವಶ್ಯಕ ವಿಚಾರಗಳನ್ನು ಮಾತನಾಡಿ ರೈತರ ದಾರಿ ತಪ್ಪಿಸುವ ಬದಲು, ಸತ್ಯ ಮಾತನಾಡಿ. ಇಲ್ಲವೆಂದರೆ ರೈತರ ಬಿಸಿ ತೋರಿಸಬೇಕಾಗುತ್ತದೆ. ಸ್ವಾವಲಂಬಿಯಾಗಿ ಬದಕಲು ರೈತರು ಹೋರಾಟಕ್ಕೆ ಕೈ ಜೋಡಿಸಿದಾಗ ಸರ್ಕಾರ ಕಣ್ಣು ತೆರೆಯಲಿದೆ ಎಂದು ಆಗ್ರಹಿಸಿದರು.
ಈ ವೇಳೆ ಮನವಿ ಸ್ವೀಕರಿಸಲು ಆಗಮಿಸಿದ ಅಧಿಕಾರಿಗಳಿಗೆ ರೈತರು ತರಾಟೆಗೆ ತಗೆದುಕೊಂಡರು. ತುಂಗಭದ್ರಾ ಜಲಾಶಯದ ಕಾರ್ಯದರ್ಶಿ ಎಲ್ಲಿ? ಅಷ್ಟು ದೂರದಿಂದ ಬಂದು ಹೋರಾಟ ಮಾಡುತ್ತಿದ್ದೇವೆ. ಸ್ಥಳಕ್ಕೆ ಬರೋಕಾಗಲ್ವಾ? ಟಿಬಿ ಬೋರ್ಡ್ ಸೆಕ್ರೆಟರಿ ಓ.ಆರ್.ಕೆ.ರೆಡ್ಡಿ ಇಲ್ಲಿ ಬರಬೇಕು ಎಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟುಹಿಡಿದರು. ನಂತರ ಸೆಕ್ರೆಟರಿ ಓ.ಆರ್.ಕೆ.ರೆಡ್ಡಿ ಬಂದು ಮನವಿ ಸ್ವೀಕರಿಸಿದರು.
ಪ್ರಮುಖರಾದ ಚಾಮರಸ ಮಾಲಿಪಾಟೀಲ್, ವೀರಸಂಗಯ್ಯ, ಬಡೆಲಡಕು ನಾಗೇಂದ್ರ, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಶರಣಪ್ಪ ಗೌಡ ಜಾಡಲದಿನ್ನಿ, ಶಿವಕುಮಾರ್ ಪಾಟೀಲ್ ವಟಗಲ್ ಇತರರಿದ್ದರು.