ಹೊಸಪೇಟೆ: ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುವ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ದಲಿತ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಕೆ. ಬಸವರಾಜ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ, ದಲಿತರಿಗೆ ಸಿಎಂ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ. ಆದರೆ, ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಸಿಎಂ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾದರೆ, ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿಕೊAಡು ಬಂದಿರುವ ದಲಿತರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ್ ಖರ್ಗೆ 50 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಜಿ. ಪರಮೇಶ್ವರ ಸತತ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇವರು ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶ ಹಲವು ಬಾರಿ ತಪ್ಪಿ ಹೋಗಿದೆ. ದಲಿತ ಸಮುದಾಯಕ್ಕೆ ಸೇರಿದ ಯಾರಿಗಾದರೂ ಸಿಎಂ ಗಾದಿಗೆ ಏರಿಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷ್ಯ ತೋರಿದರೆ ಬಲಗೈ ಸಮುದಾಯ ಪಕ್ಷನಿಷ್ಠೆ ಬದಲಿಸಲಿದೆ ಎಂದರು.
ಒಳ ಮೀಸಲಾತಿಯಲ್ಲಿ ಸಿ ಗುಂಪಿಗೆ ಸೇರಿದ ಅಲೆಮಾರಿಗಳನ್ನು ಸೇರಿಸಿ ಅನ್ಯಾಯ ಮಾಡಿದೆ. ಇದರಿಂದ ಪ್ರಬಲ ಸಮುದಾಯಗಳ ಜತೆಗೆ ಪೈಪೋಟಿ ನಡೆಸಿ ಉದ್ಯೋಗಾವಕಾಶ ಪಡೆಯಲು ಅಲೆಮಾರಿ ಸಮುದಾಯಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಸಿ ಗುಂಪಿಗೆ ನೀಡಿರುವ ಶೇ.5ರ ಮೀಸಲಾತಿಯಲ್ಲಿ ಶೇ.1ರಷ್ಟು ಅಲೆಮಾರಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಡಾ.ಈರಮ್ಮ, ಎಂ.ಸಿ.ಓAಕಾರಪ್ಪ, ಸಿ.ನಾರಾಯಣಸ್ವಾಮಿ, ನಿರಂಜನ ಮೂರ್ತಿ, ವೀರಭದ್ರಪ್ಪ, ಸಿ.ಡಿ.ವೀರಣ್ಣ, ವೆಂಕಟೇಶ್, ರಾಮಚಂದ್ರಪ್ಪ, ರಮೇಶ್ ಇತರರಿದ್ದರು.