ಹೊಸಪೇಟೆ : ಜಾತಿವಾರು ನಿಗಮಗಳನ್ನು ವಿಸರ್ಜಿಸಿ ದೇವರಾಜ್ ಅರಸು ನಿಗಮದಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಭಾನುವಾರ ಟಿಬಿಡ್ಯಾಂನ ವೈಕುಂಠದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ದೇವರಾಜ್ ಅರಸ್ ಅಭಿವೃದ್ದಿ ನಿಗಮದ ವ್ಯಾಪ್ತಿಯಲ್ಲಿದ್ದ, ಹಲವು ಓಬಿಸಿ ಜಾತಿಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಜಾತಿವಾರು ನಿಗಮಗಳ ರಚನೆ ಮಾಡಲಾಯಿತು. ಇದರಿಂದ ಜಾತಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬುದು ಆರೋಪಿಸಲಾಗುತ್ತಿದೆ. ದೇವರಾಜ್ ಅರಸು ನಿಗಮದ ವ್ಯಾಪ್ತಿಯಲ್ಲಿದ್ಧಾಗ ಪ್ರತಿಯೊಂದು ಜಾತಿಗಳಿಗೆ ಈ ಹಿಂದೆ ತಾಲೂಕಿನಲ್ಲಿ 15 ರಿಂದ 20 ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಪ್ರತ್ಯೇಕ ನಿಗಮ ರಚನೆಯಿಂದ ಇಬ್ಬರಿಂದ ಮೂವರಿಗೆಷ್ಟೇ ಸೌಲಭ್ಯ ದೊರೆಯುತ್ತಿದೆ. ನಿಗಮಗಳಿಗೆ ಅತೃಪ್ತ ರಾಜಕೀಯ ಮುಖಂಡರನ್ನು ಅಧ್ಯಕ್ಷ, ನಿರ್ದೇಶಕರನ್ನಾಗಿ ನೇಮಕವಾಗಿದ್ದಾರೆ. ಇದರಿಂದ ನಿಗಮಗಳಿಗೆ ಹಂಚಿಕೆಯಾಗುವ ಅನುದಾನದ ಬಹುಪಾಲು ಅಧ್ಯಕ್ಷರು ಹಾಗೂ ಸಿಬ್ಬಂದಿಯ ಸಂಬಳ ಕಾರು, ಸಾರಿಗೆ ವೆಚ್ಚಕ್ಕಾಗಿ ವ್ಯಯವಾಗುವುದರಿಂದ ಅರ್ಜಿದಾರ ಫಲಾನುಭವಿಗಳಿಗೆ ಹಣಕಾಸಿನ ತೊಂದರೆಯಾಗಿ. ನಿರುದ್ಯೋಗಿಗಳು ಸಾಲ ಸೌಲಭ್ಯ ವಂಚಿತರಾಗುತ್ತಾರೆ.
ಪ್ರತಿ ವರ್ಷ ಇತರೆ ಜಾತಿಗಳು ತಮಗೂ ಪ್ರತ್ಯೇಕ ನಿಗಮ ಬೇಕು ಎಂಬ ಬೇಡಿಕೆ ನಿರಂತರವಾಗಿದೆ. ಇದಕ್ಕೆ ಕೊನೆ ಎಂಬುದೇ ಇಲ್ಲದಂತಾಗಿದೆ. ಹೆಚ್ಚೆಚ್ಚು ನಿಗಮಗಳ ರಚನೆಯಿಂದ ಅವುಗಳ ಮೇಲ್ವಿಚಾರಣೆ ಆಡಳಿತ ವ್ಯವಸ್ಥೆ ಕಷ್ಟಕರವಾಗಿ ಹಣಕಾಸಿನ ಅವ್ಯವಹಾರ ಹಗರಣಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಪ್ರತ್ಯೇಕತೆಯ ಮನೋಭಾವನೆ ಉಂಟಾಗಿ ಹಿಂದುಳಿದ ವರ್ಗಗಳಲ್ಲಿ ಐಕ್ಯತೆ ಇಲ್ಲದಂತಾಗುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಆದ್ದರಿಂದ ಅಸಂಖ್ಯಾತ ಹಿಂದುಳಿದ ಜಾತಿಗಳ ಹಿತದೃಷ್ಠಿಯಿಂದ ಸರ್ಕಾರವು ಕೂಡಲೇ ಜಾತಿವಾರು ನಿಗಮಗಳನ್ನು ವಿಸರ್ಜಿಸಿ, ಮೊದಲಿನಂತೆ ಓಬಿಸಿ ಜಾತಿಗಳನ್ನು ದೇವರಾಜ್ ಅರಸು ನಿಗಮಗಳಲ್ಲಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಯು.ಆಂಜನೇಯಲು, ಸಣ್ಣಮಾರೆಪ್ಪ, ಕರಿಯಪ್ಪಗುಡಿಮನಿ ಇತರರಿದ್ದರು.