ಹೊಸಪೇಟೆ: ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ನಗರ ಸೇರಿದಂತೆ ತಾಲೂಕಿನಲ್ಲಿ ಹೊಗೆಮಂಜು ಶನಿವಾರ ಮಧ್ಯಾಹ್ನದವರೆಗೆ ಆವರಿಸಿದ್ದು ಮಲೆನಾಡಂತೆ ವಾತಾವರಣ ಸೃಷ್ಠಿಯಾಗಿದೆ.
ಮಂಜು ಕವಿದ ವಾತಾವರಣದಿಂದ ಜನ, ಇದು ಮಲೆನಾಡೋ, ಬಿಸಿಲನಾಡೋ ಎನ್ನುವಂತೆ ನಗರ, ಹಂಪಿ, ಕೊಪ್ಪಳದ ಆನೆಗುಂದಿ ಭಾಗದಲ್ಲಿ ಮಂಜು ಕವಿದ ವಾತವರಣ ಸೃಷ್ಠಿಯಾಗಿದೆ. ಮಂಜು ಆವರಿಸಿದ ಹಿನ್ನೆಲೆ ಎದುರಿಗೆ ಬರುವ ವಾಹನ ಕೂಡ ಕಾಣದಂತಾಗಿದ್ದು, ಲೈಟ್ ಹಾಕಿಕೊಂಡು ವಾಹನ ಚಲಾಯಿಸಿದರು. ಬೆಳಗ್ಗೆ 12 ಗಂಟೆಯಾದರೂ, ಪ್ರಕೃತಿ ಮಂಜಿನಲ್ಲಿ ಮರೆಯಾಗಿತ್ತು.
ಸಾಮಾನ್ಯವಾಗಿ ನವೆಂಬರ್‌ನಿಂದ ಜನವರಿ ತಿಂಗಳವರೆಗಿನ ಚಳಿಗಾಲದ ಅವಧಿಯಲ್ಲಿ ಮಂಜು ಉಂಟಾಗುತ್ತದೆ. ಇದಕ್ಕೆ ಕಾರಣ ಚಳಿಗಾಲದ ವೇಳೆ ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಇದ್ದು ರಾತ್ರಿ ವೇಳೆಯಲ್ಲಿ ಸಸ್ಯಗಳು ಹೆಚ್ಚಾದ ನೀರನ್ನು ಎಲೆಗಳ ಮೂಲಕ ಬಾಷ್ಪ ವಿಸರ್ಜನೆ ಮಾಡುತ್ತವೆ. ಆ ನೀರು ವಾತಾವರಣ ಸೇರಿ ಚಳಿಗಾಲದಲ್ಲಿ ಕಡಿಮೆ ಉಷ್ಣತೆ ಇರುವ ಕಾರಣ ಮಂಜಿನ ರೂಪವನ್ನು ಪಡೆಯುತ್ತವೆ. ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಉಷ್ಣಾಂಶ ಅಧಿಕ ಇರುವ ಕಾರಣ ಆ ನೀರು ವಾತಾವರಣದ ಉಷ್ಣತೆಗೆ ಕರಗಿ ಇಬ್ಬನಿ ರೂಪವನ್ನು ಪಡೆಯುತ್ತವೆ. ಚಳಿಗಾಲದಲ್ಲಿಯೂ ಎಲ್ಲ ದಿನಗಳಲ್ಲಿಯೂ ಈ ಮಂಜು ಕಂಡುಬರುವುದಿಲ್ಲ. ವಾತಾವರಣದಲ್ಲಿ ಅತೀ ಕಡಿಮೆ ಉಷ್ಣಾಂಶ ಇದ್ದಾಗ ಮಾತ್ರ ಕಂಡುಬರುತ್ತದೆ ಎನ್ನುತ್ತಾರೆ ತಜ್ಞರು.