ಹೊಸಪೇಟೆ: ಪೊಲೀಸ್ ಕಮಿಷನರ್ ಬಿ.ದಯಾನಂದರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ನಗರದಲ್ಲಿ ವಾಲ್ಮೀಕಿ ಸಮಾಜದಿಂದ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ರಸ್ತೆತಡೆ ನಡೆಸುವ ಮೂಲಕ ಪ್ರತಿಭಟಿಸಿದರು. ನಂತರ ಉಪವಿಭಾಗಿಯ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಉಪವಿಭಾಗಿಯಾಧಿಕಾರಿ ವಿವೇಕಾನಂದರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ಗೋಸಲ ಭರಮಪ್ಪ ಮಾತನಾಡಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಜ್ಯ ಕಂಡAತಹ ದಕ್ಷ ಹಾಗೂ ಪ್ರಾಮಾಣಿಕಅಧಿಕಾರಿ. ತಮ್ಮ ಸೇವಾ ಅವಧಿಯಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅಂತಹ ಅಧಿಕಾರಿಯನ್ನು ಏಕಾಏಕಿ ಅಮಾನತು ಮಾಡಿರುವುದನ್ನು ವಾಲ್ಮೀಕಿ ಸಮಾಜತೀವ್ರವಾಗಿ ಖಂಡಿಸುತ್ತದೆ ಎಂದರು.
ನಿವೃತ್ತ ಪ್ರಾದ್ಯಾಪಕ ಡಾ.ಫನ್ನಂಗಧರ್ ಮಾತನಾಡಿ, ಸರ್ಕಾರ ಮತ್ತು ಕೆಎಸ್ಸಿಎ ಕ್ರಿಕೆಟ್ ಆಡಳಿತ ಮಂಡಳಿ ಪೊಲೀಸ್ ಇಲಾಖೆಯ ಸಲಹೆಗಳನ್ನು ನಿರ್ಲಕ್ಷಿಸಿ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ದಿಡೀರ್ ಕಾರ್ಯಕ್ರಮ ಆಯೋಜಿಸಿದ್ದರಿಂದಾಗಿ ಅಭಿಮಾನಿಗಳ ಕಾಲ್ತುಳಿತ ಪ್ರಕರಣ ನಡೆದಿದೆ. ಅಮಾಯಕರು ಬಲಿಯಾಗಿರುವುದಕ್ಕೆ ವಾಲ್ಮೀಕಿ ಸಮಾಜ ವಿಷಾಧ ವ್ಯಕ್ತಪಡಿಸುತ್ತದೆ. ಆದರೆ, ಸರ್ಕಾರತನ್ನ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಬಿ.ದಯಾನಂದ್ ಸೇರಿದಂತೆ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಸೇರಿದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಬಿ.ದಯಾನಂದ್‌ರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಾಲ್ಮೀಕಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಈ ಪ್ರತಿಭಟನೆ ಆರಂಭ ಮಾತ್ರ. ಸರ್ಕಾರ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೆ ರಾಜ್ಯಾಧ್ಯಂತ ತೀವ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳನಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ಪ್ರಮುಖರಾದ ಎಂ.ಜAಬಯ್ಯ ನಾಯಕ, ಗುಜ್ಜಲ ಶ್ರೀನಾಥ, ದೇವರಮನಿ ಶ್ರೀನಿವಾಸ, ಜಂಬಾನಳ್ಳಿ ವಸಂತ, ಕಿನ್ನಾಳ ಹುಮಂತ, ಬಿಸಾಟಿ ತಾಯಪ್ಪ ನಾಯಕ, ದುರುಗಪ್ಪ ಪೂಜಾರಿ, ಪಿ.ವಿ.ವೆಂಕಟೇಶ್, ಎಸ್.ಎಸ್.ಚಂದ್ರಶೇಖರ್, ಗುಜ್ಜಲ ಚಂದ್ರಶೇಖರ್, ವೆಂಕೋಬಪ್ಪ, ಕಿಶೋರ್ ಇತರರಿದ್ದರು.