ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಾಸಿಕ್ಯೂಷನ್ ನೀಡಿದ್ದಾರೆ. ಮುಡಾ ಹಗರಣ ನಡದೇ ಇಲ್ಲ, ಆದರೂ ಪ್ರಾಸಿಕ್ಯೂಷನ್ ನೀಡಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಡಾ ಹಗರಣ ನಡದೇ ಇಲ್ಲ, ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಾಸಿಕ್ಯೂಷನ್ ನೀಡಲಾಗಿದೆ. ಇದರಲ್ಲಿ ರಾಜ್ಯಪಾಲರ ಅಧಿಕಾರ ದುರ್ಬಳಕೆ ಆಗಿದೆ. ರಾಜ್ಯಪಾಲರ ಮೇಲೆ ಒತ್ತಡ ಹೇರಿ ಪ್ರಾಸಿಕ್ಯೂಷನ್ ಕೊಡಿಸಲಾಗಿದೆ. ರಾಜ್ಯಪಾಲರ ಬಳಿ ಬಾಕಿ ಇರುವ ಉಳಿದ ಪ್ರಕರಣಗಳ ಬಗ್ಗೆ ಮೌನ ವಹಿಸಿದ್ದಾರೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತದವರು ತನಿಖೆ ಮಾಡಿದ್ದಾರೆ. ಈ ಪ್ರಕರಣದ ಕುರಿತು ಪ್ರಾಸಿಕ್ಯೂಷನ್ ಕೋರಿ ಲೋಕಾಯುಕ್ತದವರು ರಾಜ್ಯಪಾಲರಿಗೆ ಕೋರಿದ್ದಾರೆ. ಆದರೂ ನೀಡಲಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಕಾರಣಕ್ಕಾಗಿ ಪ್ರಾಸಿಕ್ಯೂಷನ್ ನೀಡಲಾಗಿದೆ. ಹಗರಣವೇ ನಡೆದಿಲ್ಲ, ಆದರೂ ನೀಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ ಕೂಡಲೇ ಸಿಎಂ ರಾಜೀನಾಮೆ ಕೊಡಲು ಬರುವುದಿಲ್ಲ. ಕಾಂಗ್ರೆಸ್‌ನ 136 ಶಾಸಕರಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹೈಕಮಾಂಡ್ ನಿರ್ಧರಿಸಿದರೆ, ರಾಷ್ಟ್ರಪತಿ ಭವನದ ಎದುರು ಪರೇಡ್ ನಡೆಸಲಾಗುವುದು ಎಂದರು. ಶಾಸಕ ಎಚ್.ಆರ್. ಗವಿಯಪ್ಪ ಇದ್ದರು.