ಹೊಸಪೇಟೆ: ಹೈಕೋರ್ಟ್ ತೀರ್ಪು ಹೊರ ಬಂದಾಗಿದೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದೆ ವರೆಯುವ ಭಂಡತನ ಸರಿಯಲ್ಲ. ಅವರು ಸಾಚಾ ಆಗಿದ್ದರೆ ರಾಜಿನಾಮೆ ನೀಡಲಿ. ಮೊದಲು ರಾಜೀನಾಮೆ ಕೊಟ್ಟು ನಂತರ ಅವರು ತನಿಖೆ ಎದುರಿಸಬೇಕು. ಅಧಿಕಾರದಲ್ಲಿ ಕೊಂಡು ತನಿಖೆ ಎದುರಿಸಿದರೆ, ಅದು ನ್ಯಾಯಸಮ್ಮತವಾಗಲ್ಲ ಎಂದರು.
ಮುಡಾ ಹಗರಣ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಿತ್ತು. ಪಾದಯಾತ್ರೆ ಮಾಡಿತ್ತು. ಹೈಕೋರ್ಟ್ ನಿರ್ಧಾರದಿಂದ ಬಿಜೆಪಿಗೆ ದೊಡ್ಡ ಜಯ ಸಿಕ್ಕಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯಗೆ ಭಾರೀ ಮುಖಭಂಗವಾಗಿದೆ. ಬಡವರು ಮತ್ತು ದಲಿತರಿಗೆ ಮೀಸಲಾದ ಭೂಮಿಯನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿರುವ ಭೂಗಳ್ಳರಿಗೆ ಇದು ಎಚ್ಚರಿಕೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದು ನ್ಯಾಯೋಚಿತವೇ? ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಯಾವ ಉದ್ದೇಶ ಇಲ್ಲ. ಇಷ್ಟೆಲ್ಲ ಆದರೂ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರು ಮುಂದುವರಿಯಬಾರದು. ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಯಾವುದೋ ಶಾಪವೋ ತಿಳಿದಿಲ್ಲ. 19ನೇ ಗೇಟ್ ದುರಸ್ತಿಯಾಗಿದೆ. ಪಿತೃ ಪಕ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಣೆ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಯಾವುದೇ ಶುಭಕಾರ್ಯಗಳು ಮಾಡೋದಿಲ್ಲಾ. ಸನಾತನ ಹಿಂದೂ ಧರ್ಮವೂ ಇದನ್ನೇ ಹೇಳುತ್ತದೆ. ಪಿತೃಪಕ್ಷದಲ್ಲೇ ಬಾಗೀನ ಅರ್ಪಣೆ ಮಾಡಿ, ತುಂಗಭದ್ರೆಯ ಅವಕೃಪೆಗೆ ಪಾತ್ರರಾಗಿದ್ದಾರೆ. ತಾಯಿ ತುಂಗಭದ್ರೆ ಮುನಿಸಿಕೊಳ್ಳುತ್ತಾಳೆ. ಎರಡೇ ದಿನದಲ್ಲಿ ಫಲ ಸಿಗಲಿದೆ ಎಂದು ಹೇಳಿದ್ದೆ. ಅದರಂತೆ ಭ್ರಷ್ಟಾಚಾರದಲ್ಲಿ ತೋಡಗಿರೋ ಕಾಂಗ್ರೆಸ್ ಸರ್ಕಾರದ ಅವನತಿಗೆ ತುಂಗಭದ್ರೆ ಕೋಪಕ್ಕೆ ಬಲಿಯಾಗಿದ್ದಾರೆ ಎಂದರು.
ಪ್ರಮುಖರಾದ ಅಯ್ಯಳಿ ತಿಮ್ಮಪ್ಪ, ಅಶೋಕ್ ಜೀರೆ, ಬಾಲಹುಣಸಿ ರಾಮಣ್ಣ, ಕಿಚಡಿ ಕೊಟ್ರೇಶ, ರಾಘವೇಂದ್ರ ಇದ್ದರು.