ಹೊಸಪೇಟೆ: ಸಿರಿಧಾನ್ಯಗಳೇ ಸೂಪರ್ ಫುಡ್ ಗಳಾಗಿದ್ದು, ಕೇವಲ ನಮ್ಮ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಇವುಗಳಿಗೆ ಭಾರಿ ಬೇಡಿಕೆಯಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಭಿಪ್ರಾಯಪಟ್ಟರು.
ನಮ್ಮ ನಡೆ ಸಿರಿಧಾನ್ಯದ ಕಡೆ ಕಾರ್ಯಕ್ರಮ ನಿಮಿತ್ತ ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನರ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಗಳಿಗೆ ಕಡಿಮೆ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮಥ್ಯವನ್ನು ಈ ಧಾನ್ಯಗಳ ಸಸಿಗಳು ಹೊಂದಿವೆ. ಇವು ಇತರ ಬೆಳೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿವೆ. ಇತ್ತೀಚೆಗೆ ರೈತರು ಕೂಡ ಬರಿ ಅನ್ನ ಊಟ ಮಾಡಿ ಸಿರಿ ಧಾನ್ಯ ಬಿಡುತ್ತಿದ್ದಾರೆ. ನಮ್ಮ ಬೆಳೆಗಳನ್ನು ಊಟ ಮಾಡಿ, ಉಳಿದ ಧಾನ್ಯಗಳನ್ನು ಮಾರಾಟ ಮಾಡಬೇಕು. ಆಗ ಈ ಸಿರಿಧಾನ್ಯಗಳಿಗೆ ಹೆಚ್ಚಿನ ಆಧ್ಯತೆ ಸಿಗಲಿದೆ ಎಂದರು.
ಸ್ಪರ್ಧೆಯಲ್ಲಿ ಇಬ್ಬರು ಪುರುಷರು ಸೇರಿದಂತೆ 47 ಮಹಿಳೆಯರು ಭಾಗಿಯಾಗಿದ್ದರು. ರಾಗಿ ಕೇಲ್ಸ್, ಸಜ್ಜೆ ಮಿದಿಕೆ, ರಾಗಿ ರೊಟ್ಟಿ, ನವನಕ್ಕಿ ಬಿರಿಯಾನಿ, ಬುತ್ತಿನ ಅನ್ನ, ಅಗಸೆ ಹಿಂಡೆ, ನವಣೆ ಹಾಲುಬಾಯಿ, ಖಿರ್, ನವಣಿ ಪೊಂಗಲ್, ಲಾಡು, ರೊಟ್ಟಿ, ಪಡ್ಡು, ಮೈಸೂರು ಪಾಕ್, ತೋಗೆ, ಹುಗ್ಗಿ, ಉಪ್ಪಿಟ್ಟು, ರಾಗಿ ಹಲ್ವ, ಚಕ್ಲಿ, ಮಾಲ್ದಿ, ರಾಗಿ ತಾಲಿಪೆಟ್ಟೆ, ಬಿಸಿ ಬೆಳೆಬಾತ್, ರಾಗಿ ಮೊಮೊಸು, ಕಿಲ್ಸಾ, ಪಲಾವ್, ರಾಗಿ ಗಾರ್ಗಿ, ಕರದೆಂಟು, ಸಾಮೆ ಬಿಸಿ ಬೆಳೆಬಾತ್, ನವಣೆ ಹೊಳಗೆ, ಸಜ್ಜಿ ಕಡಬು, ಜೋಳದ ಅನ್ನ, ರಾಗಿ ಹಪ್ಪಳ, ಜೋಳದ ಅಮ್ಲಿ, ಸುರಳಿ ಹೋಳಗಿ, ಬರಗು ಎಗ್ ರೈಸ್, ಜೋಳದ ಖಾರ ಮುದ್ದೆ, ಅಲಸಂದೆ ಬೆಳೆ ಪಯಸ ಇತರೆ ಖಾದ್ಯಗಳನ್ನು ಸಿದ್ದ ಪಡಿಸಿದರು.
ಜಿ.ಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಕೃಷಿ ಜೆಡಿ ಶರಣಪ್ಪ ಮುದುಗಲ್, ಹೂವಿನ ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಆಹಾರ ತಜ್ಞೆ ರಾಜೇಶ್ವರಿ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಸುನೀತಾ ಇತರರಿದ್ದರು.