ಜಿಲ್ಲೆ

ಮದ್ಯ ಸೇವನೆ 291 ಪ್ರಕರಣ ದಾಖಲು

ಮಂಜುನಾಥ

ಹೊಸಪೇಟೆ: ಜಿಲ್ಲೆಯಲ್ಲಿ ನಿರಂತರ ಕಾರ್ಯಾಚರಣೆ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ನಿಯಮದ ಉಲ್ಲಂಘನೆ ಪ್ರಕರಣ ನಿರಂತರವಾಗಿ ವರದಿಯಾಗುತ್ತಿವೆ. ಬುಧವಾರ ಒಂದೇ ದಿನಕ್ಕೆ 291 ಪ್ರಕರಣಗಳು ದಾಖಲಾಗಿವೆ.

ಸರ್ಕಾರಿ ಕಚೇರಿ ಆವರಣ, ಬಯಲು ಪ್ರದೇಶ ಮತ್ತು ಬಾರ್‌ಗಳ ಎದುರು ಸೇರಿ ಹಲವೆಡೆ ಬಿದ್ದಿರುವ ಮದ್ಯದ ಖಾಲಿ ಬಾಟಲ್‌ಗಳು ಸಾರ್ವಜನಿಕ ಮದ್ಯಪಾನಕ್ಕೆ ಸಾಕ್ಷಿಯಂತಿವೆ. ಇದು ಕಗ್ಗತ್ತಲಿನ ವ್ಯವಹಾರ. ಮತ್ತೊಂದೆಡೆ ಹಾಡಹಗಲಿನಲ್ಲಿಯೇ ಎಲ್ಲೆಂದರಲ್ಲಿ ಬಿಡಿ ಸಿಗರೇಟ್ ಸೇದಿ ಹೊಗೆ ಬಿಡುವ ದೃಶ್ಯ ಸಾಮಾನ್ಯವಾಗಿದೆ.

ಜಿಲ್ಲಾ ಕೇಂದ್ರದ ನಗರದ ಎಪಿಎಂಸಿ ಮಾರುಕಟ್ಟೆ, ಕೃಷಿ ಇಲಾಖೆ, ನಗರಸಭೆ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲೆಂದರಲ್ಲಿ ಮದ್ಯದ ಸೇವಿಸಿ ಬಿಸಾಡಿದ ಪ್ಯಾಕೆಟ್‌ಗಳು, ಬಾಟಲ್‌ಗಳು ಬಿದ್ದಿರುತ್ತವೆ. ವ್ಯಸನಿಗಳು ಕಗತ್ತಲಿನಲ್ಲಿ ಒಂದೆಡೆ ಕುಳಿತು, ಮದ್ಯ ಸೇವಿಸುತ್ತಿದ್ದು, ಅನೇಕ ಸ್ಥಳಗಳು ಅನೈತಿಕ ಚಟುವಟಿಕೆಯ ತಾಣಗಳಾಗುತ್ತಿವೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ವಿವಿಧಕಡೆ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಸೇವನೆ ಮಾಡುವವರ ವಿರುದ್ಧ ಬುಧವಾರ ಒಂದೇ ದಿನಕ್ಕೆ ಪೊಲೀಸರು 291 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸಪೇಟೆ ವಿಭಾಗದಲ್ಲಿ 232 ಪ್ರಕರಣಗಳು ದಾಖಲಾದರೆ, ಕೂಡ್ಲಿಗಿ ವಿಭಾಗ 29, ಹರಪನಹಳ್ಳಿ ವಿಭಾಗದಲ್ಲಿ 30 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.