ಹೊಸಪೇಟೆ: ಪ್ರಜ್ವಲ ರೇವಣ್ಣ ಪ್ರಕರಣದ ಕುರಿತು ಇನ್ನೂ ತನಿಖೆಯೇ ಆಗಿಲ್ಲ. ತನಿಖೆ ನಡೆಯಲಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ಕ್ರಮಕೈಗೊಳ್ಳಬೇಕು. ಇದರ ಬದಲಿಗೆ ನಮ್ಮನ್ನು ಪ್ರಶ್ನೆಮಾಡುತ್ತಿರುವುದು ಸರಿಯಲ್ಲ.ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ. ತನಿಖೆಯಿಂದ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದರು.
ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೂ ನ್ಯಾಯ ದೊರೆಯಬೇಕಿದೆ. ಬಿಜೆಪಿ ಕೂಡ ತನಿಖೆ ಆಗಲಿ, ಕಾನೂನು ರೀತ್ಯ ಕ್ರಮ ಕೈಗೊಳ್ಳಲಿ ಎಂದೇ ಒತ್ತಾಯಿಸುತ್ತದೆ. ಈಗಾಗಲೇ ಜೆಡಿಎಸ್ ಪ್ರಜ್ವಲರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಈ ಹಂತದಲ್ಲಿ ಬಿಜೆಪಿ ಮೈತ್ರಿ ಕಡಿದುಕೊಳ್ಳಲು ಬರುವುದಿಲ್ಲ. ಈಗಾಗಲೇ ರಾಜ್ಯದಲ್ಲಿ 14 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇನ್ನೂ 14 ಸ್ಥಾನಗಳಿಗೆ ಮೇ 7ರಂದು ಚುನಾವಣೆ ನಡೆಯಲಿದೆ. ಈಗ ಮೈತ್ರಿ ಮುರಿದುಕೊಳ್ಳುವ ಮಾತೇ ಬರುವುದಿಲ್ಲ. ನಾವು ಕೂಡ ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿ ಎಂದೇ ಹೇಳುತ್ತಿದ್ದೇವೆ. ನೇಹಾ ಹಿರೇಮಠ ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದಕ್ಕೂ ಈ ಪ್ರಕರಣಕ್ಕೂ ಹೋಲಿಕೆ ಸರಿಯಲ್ಲ. ನಾವು ಇಂತಹ ಪ್ರಕರಣವನ್ನು ಒಪ್ಪುವುದಿಲ್ಲ. ಹಾಗಾಗಿ ತನಿಖೆ ಆಗಲಿ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಧಃಪತನಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಮುಂದೆ ಕಾಂಗ್ರೆಸ್ ನೆಲಕಚ್ಚಿದೆ. ಈಗಾಗಲೇ ಎರಡು ಹಂತದ ಚುನಾವಣೆಯಲ್ಲೂ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ರಾಜ್ಯದಲ್ಲಿ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹದಿನಾಲ್ಕು ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಈಗ ಎಳೆದು ತಂದಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಇದರ ಪರಿಣಾಮ ಬೀರುವುದಿಲ್ಲ. ಹೀಗಿದ್ದರೂ ಸುಖಾಸುಮ್ಮನೆ ರಾಜಕರಣಕ್ಕೆ ಎಳೆದು ತರುತ್ತಿದೆ ಎಂದರು.
ಬಿಜೆಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ. ಶ್ರೀರಾಮುಲು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಮುಖರಾದ ಸಿದ್ಧಾರ್ಥ ಸಿಂಗ್, ಅಯ್ಯಾಳಿ ತಿಮ್ಮಪ್ಪ, ಪ್ರಿಯಾಂಕಾ ಜೈನ್, ಶೇಖರ್, ಸಾಲಿಸಿದ್ದಯ್ಯಸ್ವಾಮಿ, ಶಂಕರ ಮೇಟಿ ಇತ್ತರರಿದ್ದರು.