ಹೊಸಪೇಟೆ: ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನೂ ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿಯಿಂದ ತಾಲೂಕಿನ ಕಮಲಾಪುರದ ಪುರಸಭೆ ಮುಖ್ಯಧಿಕಾರಿ ಡಿ.ಈರಣ್ಣಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, ಕಮಲಾಪುರ ಹೋಬಳಿ ಕೇಂದ್ರವಾಗಿದ್ದು ಸುತ್ತು ಮುತ್ತಲಿನ ಗ್ರಾಮೀಣ ಪ್ರದೇಶಗಳಾದ ನಲ್ಲಾಪುರ, ಎನ್.ಆರ್.ಕ್ಯಾಂಪ್, ಕೆರೆತಾಂಡ, ಚಿನ್ನಪುರ, ವೆಂಕಟಪುರ ಸೇರಿದಂತೆ ಇತರೆ ಗ್ರಾಮಗಳಿಂದ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ತೊಂದರೆ ಆಗುತ್ತಿದೆ. ಹಲವರು ತಮ್ಮ ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಮತ್ತು ಬಸ್ ಇಲ್ಲದ ಹಳ್ಳಿಗಳಿಗೆ ಕೂಡುಲೆ ಬಸ್ ಸಂಚಾರ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಕೆ.ಎ.ಪವನ್ ಕುಮಾರ್ ಮಾತನಾಡಿ, ಕಾಲೇಜು ಇಲ್ಲದ ಸಮಯದಲ್ಲಿ ಪುಂಡ ಪೊಕಾರಿಗಳು ಕಾಲೇಜಿನ ಆವರಣದಲ್ಲಿ ಡ್ರಿಂಕ್ಸ್ ಮತ್ತು ಇತ್ಯಾದಿ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಮತ್ತು ಕಾಲೇಜು ಗೋಡೆಗಳಲ್ಲಿ ಅಸಭ್ಯವಾಗಿ(ಅಶ್ಲೀಲ) ಬರೆಯುತ್ತಿದ್ದಾರೆ. ಹಾಗಾಗಿ ಇದಕ್ಕೆಲ್ಲಾ ಕಡಿವಣ ಹಾಕಬೇಕು. ಶಾಲಾ - ಕಾಲೇಜು ಒಂದೇ ಆವರಣದಲ್ಲಿ ಇರವುದರಿಂದ ಕಾವಲುಗಾರನನ್ನು ನೇಮಕ ಮಾಡಬೇಕು. ಕಾಲೇಜಿನ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಕ್ರೀಡಾಂಗಣ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಪುರಸಭೆ ಅನುದಾನದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಹರಿಪ್ರಿಯಾ, ದುರ್ಗೇಶ್, ಸುಭಾಸ್, ಸುಲೋಚನ, ಮೋಹಿನಿ ಶ್ರೀನಿಧಿ, ಕೇಶವ, ರಮೇಶ್, ಅಜಯ, ವೀರೇಶ್, ನಾಗರಾಜ್, ಮಾರೆಮ್ಮ ಇತರರಿದ್ದರು.