ಹೊಸಪೇಟೆ: ನವದೆಹಲಿಯಲ್ಲಿ ಆಯೋಜಿಸಿರುವ ಜಿ-20 ಶೃಂಗ ಸಭೆಗೆ ರಾಹುಲ್ ಗಾಂಧಿಯನ್ನು ಕರೆಯದೆ ಬರೋಬ್ಬರಿ ಮಾಡಿದ್ದಾರೆ. ಬುದ್ಧಿ- ಗಿದ್ದಿ ಇಲ್ಲದವರನ್ನು ಕರೆದು ವಿಶ್ವದ ಮುಂದೆ ಭಾರತವನ್ನು ಏಕೆ ಅಪಮಾನ ಮಾಡ್ಕೋಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವಲ್ಪ ತಿಳಿವಳಿಕೆ ಇರುವವರನ್ನು ಮಹತ್ವದ ಸಭೆಗಳಿಗೆ ಕರೆಯುತ್ತಾರೆ ಎನ್ನುವ ಮೂಲಕ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.
ಭಾರತ ಎಂದೆಂದಿಗೂ ಭಾರತವಾಗಿರುತ್ತದೆ. ಇಂಡಿಯಾ ಹೆಸರು ಬ್ರಿಟಿಷರದ್ದು. ಅವರಿಗೆ ಕೆಲವೊಂದು ಊರಿನ ಹೆಸರು ಹೇಳಲಿಕ್ಕೆ ಬರ್ತಿದ್ದಿದ್ದಲ್ಲ. ಹೀಗಾಗಿ ಇಂಡಿಯಾ ಎಂದು ಕರೆಯುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿಲುವು ಸ್ವಾಗತಾರ್ಹ ಎಂದರು.
ಇದನ್ನೂ ಓದಿ: ದಿನೇಶ್ ಗುಂಡೂರಾವ್ಗೆ ತಿರುಗೇಟು ಕೊಟ್ಟ ಯತ್ನಾಳ್
ಮೈತ್ರಿ ಬಗ್ಗೆ ಗೊತ್ತಿಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದಿಂದ ಈವರೆಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನನ್ನಗಂತೂ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದರು.