ಹೊಸಪೇಟೆ: ರಕ್ತದಾನದಿಂದ ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಹೀಗಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಜಿ.ಪಂ. ಸಿಇಒ ಸದಾಶಿವ ಬಿ.ಪ್ರಭು ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಇನ್ನೊಬ್ಬರ ಪ್ರಾಣ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ರಕ್ತದಾನ ಮಾಡಿದಲ್ಲಿ ಆರೋಗ್ಯ ಕೆಡುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಹೊರಬರಬೇಕು. ಆರೋಗ್ಯದಿಂದ ಇರುವ ಮತ್ತು ವೈದ್ಯರು ನೀಡುವ ಸಲಹೆಯಂತೆ ರಕ್ತದಾನ ಮಾಡಬಹುದು. ಇದರಿಂದಾಗಿ ರಕ್ತದಾನ ಮಾಡಿದವರಲ್ಲಿ ಹೊಸ ಚೇತರಿಕೆ ಬರುತ್ತದೆ. ಇನ್ನೊಬ್ಬರ ಪ್ರಾಣ ಕಾಪಾಡಿದೆ ಎನ್ನುವ ಹೆಮ್ಮೆ ಬರುತ್ತದೆ. ರಕ್ತದಾನ ಸಮಾಜೋಪಯೋಗಿ ಕಾರ್ಯವಾಗಿದೆ ಎಂದು ಸಲಹೆ ನೀಡಿದರು.
ಡಿಎಚ್‌ಒ ಡಾ.ಶಂಕರ್ ನಾಯ್ಕ ಮಾತನಾಡಿ, ಜನರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವುದು, ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು. ರಕ್ತದಾನದ ಬಗ್ಗೆ ಸುತ್ತಲಿನ ಗೆಳೆಯರಿಗೆ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಹೊರಟ ಜಾಥಾವು ಡಾ.ಪುನೀತ್ ರಾಜಕುಮಾರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಪುಣ್ಯಮೂರ್ತಿ ವೃತ್ತ, ಗಾಂಧಿಚೌಕು ಮಾರ್ಗವಾಗಿ ಡಿಎಚ್‌ಒ ಕಚೇರಿಯ ವರೆಗೆ ಸಂಚರಿಸಿತು. ಬಳಿಕ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ವೈದ್ಯಾಧಿಕಾರಿಗಳಾದ ಡಾ.ಜಂಬಯ್ಯ ನಾಯಕ, ಷಣ್ಮುಖ ನಾಯ್ಕ, ಡಾ.ಕಮಲಮ್ಮ, ಜಗದೀಶ್ ಪಾಟ್ನೆ ಇತರರಿದ್ದರು.