ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ 2024-25ನೇ ಸಾಲಿನಲ್ಲಿ 12.72 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ 48 ವರ್ಷಗಳಿಂದ ಬ್ಯಾಂಕ್ ನಿರಂತರ ಲಾಭ ಗಳಿಸುತ್ತಿದೆ. ಬ್ಯಾಂಕ್‌ನಲ್ಲಿ ಡಿಜಿಟಲ್ ಬ್ಯಾಂಕಿAಗ್ ಸೇವೆ ಒದಗಿಸಲಾಗಿದೆ. ಬ್ಯಾಂಕ್ ಯುಪಿಐ ಸೇವೆ ಕೂಡ ಹೊಂದಿದೆ ಎಂದು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬ್ಯಾಂಕಿನ ಮಹಾಜನ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಬ್ಯಾಂಕು 665 ಸಹಕಾರ ಸಂಘಗಳ ಸದಸ್ಯತ್ವ ಹೊಂದಿದೆ. 130.30 ಕೋಟಿ ರೂ. ಷೇರು ಬಂಡವಾಳ ಹಾಗೂ 165.65 ಕೋಟಿ ರೂ. ಕಾಯ್ದಿಟ್ಟ ನಿಧಿ ಸೇರಿದಂತೆ 295.93 ಕೋಟಿ ರೂ. ಸ್ವಂತ ಬಂಡವಾಳ ಹೊಂದಿದೆ. ಬ್ಯಾಂಕ್ ಸುಸ್ಥಿರ ಬಂಡವಾಳ ಪ್ರಮಾಣ ಹೊಂದಿದೆ. 1687.80 ಕೋಟಿ ರೂ. ಠೇವಣಿ ಹೊಂದಿದೆ. 2724.74 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 3590.33 ಕೋಟಿ ರೂ. ವ್ಯವಹಾರ ಗಾತ್ರ ಹೊಂದಿದೆ. ರೈತರಿಗೆ 1,16,896 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ 1068.05 ಕೋಟಿ ರೂ. ನೀಡಿದೆ. ಶೇ.3ರ ಬಡ್ಡಿದರದಲ್ಲಿ ಭೂ ಅಭಿವೃದ್ಧಿ ಸಾಲ 59.20 ಕೋಟಿ ರೂ. ನೀಡಲಾಗಿದೆ. ಬ್ಯಾಂಕಿನ ಎಪಿಎ ಶೇ.3.75ರಷ್ಟಿದ್ದು, ಆರ್‌ಬಿಐ ನಿಯಮಗಳ ಪ್ರಕಾರ ಬ್ಯಾಂಕ್ ಆರೋಗ್ಯಕರವಾಗಿದೆ ಎಂದರು.
ಬ್ಯಾAಕ್‌ನಲ್ಲಿ 2.34 ಕೋಟಿ ರೂ. ಸೈಬರ್ ವಂಚನೆ ಮಾಡಲಾಗಿದೆ. ಈ ಸಂಬಂಧ ಬಳ್ಳಾರಿ ಸೈಬರ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಅಲ್ಲದೇ, ಬೆಂಗಳೂರಿಗೂ ನಿಯೋಗ ತೆರಳಿ ಉನ್ನತ ಪೊಲೀಸ್ ಅಧಿಕಾರಿಗಳ ಬಳಿಯೂ ಚರ್ಚಿಸಲಾಗಿದೆ. ಸೈಬರ್ ವಂಚಕರನ್ನು ಸೆರೆ ಹಿಡಿಯಲು ಪೊಲೀಸರು ಕೂಡ ತನಿಖೆ ಕೈಗೊಂಡಿದ್ದಾರೆ. ಈ ಬ್ಯಾಂಕು ರೈತರ ಬ್ಯಾಂಕ್ ಆಗಿದೆ. ಜತೆಗೆ ಸರ್ಕಾರಿ ನೌಕರರಿಗೂ ಸಾಲ ಸೌಲಭ್ಯದ ಜತೆಗೆ ವೇತನ ಖಾತೆಗಳನ್ನು ಕೂಡ ಬ್ಯಾಂಕ್‌ನಲ್ಲಿ ತೆರೆಯಲಾಗಿದೆ ಎಂದು ತಿಳಿಸಿದರು.
ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ, ಬ್ಯಾಂಕ್‌ನ ಉಪಾಧ್ಯಕ್ಷ ಐ.ದಾರುಕೇಶ್, ನಿರ್ದೇಶಕರಾದ ಎಲ್.ಎಸ್. ಆನಂದ, ಚಿದಾನಂದ ಐಗೋಳ ಇತರರಿದ್ದರು.