ಹೊಸಪೇಟೆ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಶೇ.40 ಇರುವ ಕಮಿಷನ್, ಬಿಬಿಎಂಪಿಯಲ್ಲಿ 50ಕ್ಕೆ ಏರಿದೆ. ವಿಧಾನಸಭೆ ಚುನಾವಣಾ ಹೊತ್ತಿಗೆ ಶೇ.70-80ಕ್ಕೆ ತಲುಪಬಹುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ರಾಜ್ಯ ಸರ್ಕಾರದ ಕಮಿಷನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿಲ್ಲ. ಬದಲಾಗಿ ಗುತ್ತಿಗೆದಾರರು ಲಿಖಿತವಾಗಿ ದೂರು ನಿಡಿದ್ದಾರೆ. ಅಭಿವೃಧಿ ಕಾರ್ಯಗಳು ನಡೆಯದೇ ಜನ ಬೇಸತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವು ಅಧಿಕಾರಕ್ಕೆ ಬರಬೇಕು ಎಂದು ಜನರು ಬಯಸುತ್ತಿದ್ದಾರೆ. ನಮಗೆ ಅಚ್ಛೇ ದಿನ್ ಬೇಡ. ಹಳೇ ದಿನಗಳೇ ಇರಲಿ ಎಂದು ಜನರು ಹೇಳುತ್ತಿದ್ದಾರೆ ಎಂದರು.
ಪಕ್ಷ ಸಂಘಟನೆಯ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದು, 18 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಪಕ್ಷದ ಸಭೆ. ಪಕ್ಷದ ಸಾಧನೆಗಳನ್ನು ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ ಎಂದರು.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್‌ನ ಅನೇಕರ ಬಲಿದಾವಾಗಿದೆ. ಆದರೆ, ಆರ್‌ಎಸ್‌ಎಸ್, ಬಿಜೆಪಿಯ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ದೇಶದ ಸ್ವಾತಂತ್ರೃದ ಅಮೃತ ಮಹೋತ್ಸವದ ವೇಳೆ ಆರ್‌ಎಸ್‌ಎಸ್‌ನವರಿಗೆ ದೇಶಾಭಿಮಾನ ಮೂಡಿದೆ. ಈಗ ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.
70 ವರ್ಷ ಕಾಂಗ್ರೆಸ್ ಆಳ್ವಿಕೆ ಮಾಡಿದೆ. ಈಗಲೂ ಜನಪರ ಕೆಲಸದಲ್ಲಿ ತೊಡಗಿದೆ. ಉತ್ಪಾದನೆ, ನವರತ್ನ ಕಂಪನಿಗಳು ಪ್ರಾರಂಭ ಮಾಡಿದ್ದು ಜವಾಹರಲಾಲ್ ನೆಹರು. 2 ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳ ಪೈಕಿ ಬಹುತೇಕ ಕಾಂಗ್ರೆಸ್ ಕಟ್ಟಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ, ಏಮ್ಸ್ ವರೆಗೆ, ಅನೇಕ ವಿದ್ಯುತ್ ಸ್ಥಾವರುಗಳು, ನೌಕಾನೆಲೆಗಳು, ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಕಾಂಗ್ರೆಸ್‌ನ ಕೊಡುಗೆಯಾಗಿವೆ ಎಂದರು.
2014ರ ನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಘೋಷಣೆಗೆ ಸೀಮಿತವಾಗಿದೆ. ಉದ್ಯೋಗ ಸೃಷ್ಟಿಗಿಂತ ನೌಕರಿ ಕಳೆದುಕೊಂಡವರೇ ಹೆಚ್ಚು. ಊಟದ ಮೇಲೂ ಜಿಎಸ್‌ಟಿ, ಹಾಲು, ಮೊಸರು ಮತ್ತಿತರ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ರೈತರ ಸಾಲ ಮನ್ನಾ ಮಾಡಲು ಮನಸ್ಸಾಗಲ್ಲ. ಆದರೆ, ಅಂಬಾನಿ, ಅದಾನಿ ಸಾಲ ಮನ್ನಾ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಪ್ರಮುಖರಾದ ರಾಜಶೇಖರ ಹಿಟ್ನಾಳ್, ವೆಂಕಟರಾವ್ ಘೋರ್ಪಡೆ, ಇಮಾಮ್ ನಿಯಾಜಿ, ಗುಜ್ಜಲ್ ರಘು, ಕುರಿ ಶಿವಮೂರ್ತಿ ಇದ್ದರು.