ಜಿಲ್ಲೆ

ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮೇ.10ಕ್ಕೆ

ಮಂಜುನಾಥ

ಹೊಸಪೇಟೆ: ಬಸವಣ್ಣನವರ ಜಯಂತಿಯನ್ನು ಏ.30 ರಂದು ಸರಳವಾಗಿ ಆಚರಿಸಿ, ಮೇ.10 ರಂದು ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಬಸವಣ್ಣನವರ ಜಯಂತ್ಯುತ್ಸವನ್ನು ಜಿಲ್ಲಾಡಳಿತದಿಂದ ಅದ್ದೂರಿಯಾಗಿ ಆಯೋಜನೆಗೆ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಶ್ವಗುರು ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಪೀಳಿಗೆ ಸೇರಿ ಮಕ್ಕಳಿಗೆ ಬಸವಣ್ಣನವರ ಚಿಂತನೆಗಳು, ತತ್ವಾದರ್ಶಗಳನ್ನು ಅರಿವು ಮೂಡಿಸಲು ವಚನ ಸಾಹಿತ್ಯದ ಪರಿಚಯ ಮಾಡಿಸುವ ಅಗತ್ಯವಿದೆ. ಪಾಲಕರು ನಿತ್ಯ ಮನೆಗಳಲ್ಲಿ ಮಕ್ಕಳಿಗೆ ದಿನಕ್ಕೊಂದು ‘ವಚನ ವಾಚನ’ ಮಾಡುವ ಮೂಲಕ ಬದುಕಿನ ಮೌಲ್ಯಗಳನ್ನು ತಿಳಿಸುವ ಕೆಲಸವಾಗಬೇಕು. ವಚನಗಳಲ್ಲಿನ ಧಾರ್ಮಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಹಾಗೂ ಅಸಮಾನತೆಯ ವಿರುದ್ಧ ವಚನಗಳ ಮೂಲಕ ತಿಳಿಸಿದ ವಿಚಾರಗಳನ್ನು ಪ್ರಸ್ತುತ ಸಮಾಜಕ್ಕೆ ಜಯಂತಿಗಳ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದರು.

ಏ.30 ರಂದು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯನ್ನು ಸರಳವಾಗಿ ಆಚರಿಸಿ ಬಳಿಕ ಶ್ರೀಕೊಟ್ಟೂರು ಸಂಸ್ಥಾನ ಮಠದಲ್ಲಿ ಜರುಗುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಮೇ.10 ರಂದು ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಬಸವಣ್ಣನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ. ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಿಂದ ಬಸವೇಶ್ವರರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.

ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಡಿವೈಎಸ್ಪಿ ಡಾ.ಮಂಜುನಾಥ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ತಹಸೀಲ್ದಾರ್ ಶೃತಿ ಎಂ.ಮಲ್ಳಪ್ಪಗೌಡ್ರ ಇತರರಿದ್ದರು.