ಜಿಲ್ಲೆ

ಬಕ್ರಿದ್ ಶಾಂತಿಯುತವಾಗಿ ಆಚರಿಸಿ

ಮಂಜುನಾಥ

ಹೊಸಪೇಟೆ: ಬಕ್ರಿದ್ ಹಬ್ಬದ ಶಾಂತಿಯುತವಾಗಿ ಆಚರಣೆ ಮಾಡಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕುಡಿವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು. ಹಬ್ಬದ ದಿನ ಮಳೆಯಾದಲ್ಲಿ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ನಾನಾ ವ್ಯವಸ್ಥೆಗಳನ್ನು ಕಲ್ಪಿಸಲು ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಸ್ಪಿ ಬಿ.ಎಲ್.ಶ್ರೀಹರಿ ಮಾತನಾಡಿ, ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕುಮಟ್ಟದಲ್ಲಿ ಹಾಗೂ ಠಾಣಾ ಮಟ್ಟದದಲ್ಲಿ ಶಾಂತಿ ಸಭೆಗಳು ನಡೆಯುತ್ತಿವೆ. ಶಾಂತಯುತವಾಗಿ ಹಬ್ಬ ನಡೆಯುವಂತೆ ಜಿಲ್ಲೆಯ ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. 16 ರಿಂದ 18 ವಯಸ್ಸಿನೊಳಗಿನ ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹರಿಬಿಟ್ಟು ಅದರಿಂದ ಅವಘಡಗಳು ಸಂಭವಿಸುತ್ತವೆ. ಅಂತವರಿಗೆ ಹಿರಿಯ ನಾಗರಿಕರು ತಿಳಿ ಹೇಳಬೇಕು. ಶಾಂತಿ ಕದಡದ ಹಾಗೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.