ಜಿಲ್ಲೆ

ಸುಳ್ಳು ಪ್ರಮಾಣ ಪತ್ರ ಹಿಂದುಳಿದ ಜಾತಿಗಳಿಗೆ ಅನ್ಯಾಯ

ಹೊಸಪೇಟೆ : ವೀರಶೈವ ಲಿಂಗಾಯತ ಸಮಾಜದ ಕೆಲವರು, ಗಾಣಿಗ ಜಾತಿ ಎಂದು ನಮೂದಿಸಿ, 2ಎ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ 198 ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ವಿರೋಧಿಸಿ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಬುಡ್ಡಿ ಬಸವರಾಜ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಈಗಾಗಲೇ 700ಕ್ಕೂ ಹೆಚ್ಚು ವೀರಶೈವ ಲಿಂಗಾಯತರು, ಗಾಣಿಗ ಜಾತಿ ಹೆಸರು ನಮೂದಿಸಿ, 2ಎ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದರಲ್ಲಿ ಕೆಲವರು ಈಗಾಗಲೇ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಇದು ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಪ್ರಕರಣಯೊಂದರಲ್ಲಿ ಉಚ್ಚ ನ್ಯಾಯಾಲಯ ಪೂರ್ವಜರ ದಾಖಲೆ ಪರಿಶೀಲಿಸಿ, ವೀರಶೈವ ಲಿಂಗಾಯತ ಸಮಾಜದ ಓರ್ವ ವ್ಯಕ್ತಿಗೆ ಗಾಣಿಗ ಜಾತಿ ಹೆಸರಿನಲ್ಲಿ 2ಎ ಪ್ರಮಾಣ ನೀಡಿದೆ. ಇದನ್ನೆ ನೆಪವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಕೆಲ ವೀರಶೈವ ಲಿಂಗಾಯತರು, ಅಧಿಕಾರಿಗಳನ್ನು ದಾರಿ ತಪ್ಪಿಸಿ 2ಎ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಆಯಾ ತಾಲ್ಲೂಕು ಕಚೇರಿಗಳಲ್ಲಿ ವೀರಶೈವ ಲಿಂಗಾಯತರಿಗೆ ಗಾಣಿಗ ಜಾತಿ ಹೆಸರಿನಲ್ಲಿ 2ಎ ಪ್ರಮಾಣ ಪತ್ರ ನೀಡಲಾಗುತ್ತಿದೆ ಇತಂಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ನಿಯೋಗ ತೆರಳಿ ಮನವಿ ಮಾಡಿಕೊಳ್ಳಲಿದೆ. ಸದ್ಯ ಸೆ.22ರಂದು ಟಿ.ಬಿ.ಡ್ಯಾಂಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಹ ಸಲ್ಲಿಸಲಾಗುವುದು. ಒಂದೊಮ್ಮೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರಮುಖರಾದ ಮಾರೇಶ್ ಮಡಿವಾಳ್, ಲಿಂಗರಾಜ್ ಯಾದವ್, ಲಕ್ಕಜ್ಜ ಮಲ್ಲಿಕಾರ್ಜುನ, ಎಸ್.ಗಾಳೆಪ್ಪ, ಮಲ್ಲಪ್ಪ, ಸೋಮಣ್ಣ ಹಾಗೂ ಯಂಕಪ್ಪ ಯಾದವ್ ಇತರರಿದ್ದರು.