ಜಿಲ್ಲೆ

ಬಾಬುಜಿ ಜೀವನ ಚರಿತ್ರೆ ಯುವ ಪೀಳಿಗೆ ಅರಿಯಲಿ

ಮಂಜುನಾಥ

ಹೊಸಪೇಟೆ: ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರು ಕ್ರಾಂತಿಗೆ ಕಾರಣರಾದರು. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಬಾಬು ಜಗಜೀವನ ರಾಮ್ ಅವರ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.

ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು. ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. ಅವರ ಸೇವೆ ಸ್ಮರಣೀಯವಾದದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ದೇಶಾದ್ಯಂತ 'ಬಾಬುಜಿ' ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ. ಸ್ವಾತಂತ್ರ‍್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು. ಅವರು ಸ್ವಾತಂತ್ರ‍್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು ಎಂದರು.