ಹೊಸಪೇಟೆ: ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪುನರ್ ಸಂಘಟನೆ ಮಾಡುವ ಅವಶ್ಯಕತೆಯಿದ್ದು ಅಂಬೇಡ್ಕರ ಅವರ ತತ್ವ ಸಿದ್ಧಾಂತ ಹೋರಾಟದ ಮನೋಭಾವ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹ ಸಮಾಜದ ಒಳಿತಿಗೆ ಶ್ರಮಿಸಬೇಕೆಂದು ಎಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾದಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭವ್ಯ ಭಾರತ ಕಟ್ಟಲು ಮಕ್ಕಳ ಪಾತ್ರ ಮುಖ್ಯ. ಜತೆಗೆ ಶಿಕ್ಷಕರು ಹಾಗೂ ಪೋಷಕರು ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕಿದೆ.
ಪ್ರತಿ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣ ಕೊಟ್ಟಾಗ ಅಭಿವೃದ್ಧಿ ಆಗಲಿದ್ದಾರೆ. ಪ್ರತಿಭಾ ಪುರಸ್ಕಾರದಂತ ಕಾರ್ಯ ಮಕ್ಕಳಿಗೆ ಉತ್ತೇಜನ ನೀಡಲಿದೆ.
ಸಮಾಜ ಮೇಲೆ ಬರಬೇಕು ಎಂದರೆ ನಾವು ಏನು ಮಾಡಬೇಕು? ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ. ಸಮುದಾಯ, ಸಮಾಜ ಅಂದಾಗ ನಂತರ ಎಲ್ಲರೂ ಒಂದೆ. ಪಕ್ಷತೀತವಾಗಿ ಒಗ್ಗಟ್ಟಾಗಿ ಸಮಾಜಕ್ಕೆ ಬೇಕಿರುವ ಸಮಾನತೆಗೆ ಹೋರಾಟ ನಡೆಯಬೇಕು. ಮಾದಿಗರು ಇನ್ನೂ ಹಿಂದುಳಿದಿದೆ ಎಂದು ಕೂಗು ಪಾರ್ಲಿಮೆಂಟ್ ಗೆ ಕೇಳಿಸಬೇಕು.
ಮೂಲ ದಲಿತ ಸಮಾಜದ ಜನಾಂಗ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿದೆ. ಪ್ರತಿಯೊಬ್ಬರು ಜಾಗೃತರಾಗಿ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಆಸ್ತಿಯನ್ನಾಗಿ ರೂಪಿಸಬೇಕೆಂದರು. ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲರಿಗೂ ಸಮನವಾಗಿ ಬದಕುವ ಹಕ್ಕು ನೀಡಿದರು. ಮಾದಿಗರ ಜನರ ಹಾಗೂ ಮಾತಂಗಿ ಮಠ ಅಭಿವೃದ್ಧಿಗೆ ಸಹಕರಿಸುವೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾರಕ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ಚಾಮಿ, ಮಾಜಿ ಸಚಿವ ಎಚ್.ಆಂಜನೇಯ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಪ್ರಮುಖರಾದ ರಾಣಿ ಸಂಯುಕ್ತ, ದೀಪಕ್ ಸಿಂಗ್, ಸಿದ್ದಾರ್ಥ ಸಿಂಗ್, ಮಾಜಿ ಅಧ್ಯಕ್ಷ ಸುಂಕಮ್ಮ, ಮಹಾಸಭಾದ ಅಧ್ಯಕ್ಷ ರಾಮಚಂದ್ರ ಇತರರಿದ್ದರು.