ಹೊಸಪೇಟೆ: ಅಭಿವೃದ್ಧಿ ಹರಿಕಾರರಾದ ಡಿ ದೇವರಾಜ್ ಅರಸು ಅವರು ಹಿಂದುಳಿದ ವರ್ಗಗಳಿಗೆ ದಲಿತರಿಗೆ ಸಮಾಜದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದರ ಮೂಲಕ ಕೆಳ ವರ್ಗಗಳನ್ನು ಸಮಾನರನ್ನಾಗಿಸಲು ಶ್ರಮಿಸಿದರು ಎಂದು ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಅಶೋಕಕುಮಾರ್ ರಂಜೇರೆ ಹೇಳಿದರು.
ಕನ್ನಡ ವಿವಿಯ ಅನಿಕೇತನ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿಶೇಷ ಘಟಕದಿಂದ ಡಿ ದೇವರಾಜ ಅರಸು ಅವರ 110ನೇ ಜನ್ಮ ದಿನ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಡಿ ದೇವರಾಜ್ ಅರಸು ಅವರು ಜೀತ ಪದ್ಧತಿ ಮತ್ತು ಮಲಹೊರುವ ಪದ್ಧತಿ, ನಿರ್ಮೂಲನೆ ಮಾಡಿದರು. ಹಿಂದುಳಿದ ವರ್ಗಗಳ ಸ್ಥಾಪನೆ, ಭಾಗ್ಯಜ್ಯೋತಿ ಯೋಜನೆ, ವೃಕ್ಷ ಸಂರಕ್ಷಣಾ ಕಾಯಿದೆ ಜಾರಿಗೆ ತಂದರು. ಕೆಳ ಸಮುದಾಯಗಳನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು ಶ್ರಮಿಸಿದರು. ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ, ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಈ ರೀತಿಯಾಗಿ ಡಿ ದೇವರಾಜ ಅರಸು ಅವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಘಟಕದ ಸಂಯೋಜನಾಧಿಕಾರಿ ಡಾ.ಎಸ್.ಆರ್.ಚನ್ನವೀರಪ್ಪ ಮಾತನಾಡಿ, ಡಿ ದೇವರಾಜ ಅರಸು ಅವರು ತಳ ಸಮುದಾಯದ ಬಡವರ, ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದವರು. ಶಿಷ್ಯ ವೇತನ ವೃದ್ಧಾಪ್ಯ ವೇತನ ವಿದ್ಯಾರ್ಥಿ ವೇತನ ಮೊದಲಿಗೆ ಪ್ರಾರಂಭಿಸಿದರು. ಯುವಜನರ ನಿರುದ್ಯೋಗದ ಹಸಿವು ನೀಗಿಸಲು ಸರ್ಕಾರಿ ನೌಕರರ ನಿವೃತ್ತ ವಯಸ್ಸನ್ನು 58 ರಿಂದ 55ಕ್ಕೆ ತಂದರು. ಮೈಸೂರು ಅರಮನೆಯಲ್ಲಿ ಮುಕ್ತವಾಗಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿದರು. ನಂತರ ಈ ವೇಳೆ ಸದ್ಭಾವನಾ ದಿನದ ನಿಮಿತ್ತ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಾಧ್ಯಾಪಕ ಡಾ.ಅಶೋಕಕುಮಾರ್ ರಂಜೇರೆ ಪ್ರಮುಖರಾದ ಡಾ.ವೀರೇಶ ಬಡಿಗೇರ, ವಿವಿಯ ಸ್ಥಾನಿಕಾಧಿಕಾರಿಗಳಾದ ದೇವೇಂದ್ರಪ್ಪ, ಶಂಕರ್ ಬಡಿಗೇರ್ ಇದ್ದರು