ಹೊಸಪೇಟೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೈ ಭೀಮ್ ಸರ್ಕಲ್‌ನಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಖರ್ಗೆ ಅವರ ಮೈಬಣ್ಣವನ್ನು ಹೀಯಾಳಿಸುವ ಮೂಲಕ ದ್ರಾವಿಡರ ಅಸ್ಮಿತೆಯನ್ನು ಅಣುಕಿಸುವ ಜತೆಗೆ ಜಾತಿ ನಿಂದನೆ ಮಾಡಿದ್ದಾರೆ. ಜಾತಿ, ಧರ್ಮ, ಲಿಂಗ ಮತ್ತು ಜನಾಂಗದ ಆಧಾರದಲ್ಲಿ ಮಾತನಾಡುವುದು ಸಂವಿಧಾನಾತ್ಮಕವಾಗಿ ನಿಷೇಧವಿದೆ. ಆದರೂ, ಅಂತಹ ಪದ ಪ್ರಯೋಗದ ಮೂಲಕ ಮನುವಾದವನ್ನು ಪ್ರದರ್ಶಿಸಿದ್ದಾರೆ. ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಟಿ.ವಾಸುದೇವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಣ್ಣದಮನೆ, ಯುವ ಘಟಕದ ಅಧ್ಯಕ್ಷ ಜೆ.ಶಿವಕುಮಾರ, ಪ್ರಗತಿಪರ ಸಂಘಟನೆಗಳ ಮುಖಂಡರಾದ ದುರ್ಗಪ್ಪ ಪೂಜಾರ್, ಟಿ.ಡಿ.ವೆಂಕಟರಮಣ, ಆಟೋ ರಾಮಚಂದ್ರ, ವೀರಭದ್ರ ನಾಯಕ, ಸಜ್ಜದ್ ಖಾನ್, ಮುದುಕಪ್ಪ, ನೀಲಕಂಠ, ಇಮ್ತಿಯಾಜ್ ಓಬಳೇಶ್, ಹುಲುಗಣ್ಣ, ಗುಲಾಂ ರಸೂಲ್, ಕಾರಿಗನೂರು ರಾಮಕೃಷ್ಣ, ಛಲವಾದಿ ಮಹಾಸಭಾದ ಮುಖಂಡರಾದ ಜಿಕೆಟಿ ಕೊಟ್ರೇಶ್, ಸುನೀಲ್ ಕುಮಾರ್, ಕೂಡ್ಲಿಗಿ ಕೊಟ್ರೇಶ್, ಜಗದೀಶ್ ಮತ್ತಿತರರು ಇದ್ದರು.