ಹೊಸಪೇಟೆ: ಪೊಲೀಸರು ನಿತ್ಯದ ಒತ್ತಡಗಳ ಮಧ್ಯೆ ಸಮಯ ಹೊಂದಿಸಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯನ್ನು ಜೀವನದ ಭಾಗ ಮಾಡಿಕೊಳ್ಳಬೇಕು ಎಂದು ಡಿಸಿ ಅನಿರುದ್ಧ್ ಶ್ರವಣ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ನೂತನ ವಿಜಯನಗರ ಜಿಲ್ಲೆಯ ಪ್ರಥಮ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನೂತನ ಜಿಲ್ಲೆ ಉದ್ಘಾಟನೆ ಬಳಿಕ ಹಂತ ಹಂತವಾಗಿ ಜಿಲ್ಲೆ ಕಟ್ಟುವ ಕೆಲಸ ಆಗಿತ್ತಿದೆ. ಅದರ ಮಧ್ಯೆ ಪ್ರಥಮ ಬಾರಿಗೆ ಹೊಸ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಕ್ರೀಡೆ ಮತ್ತು ಪೊಲೀಸರು ಎರಡಕ್ಕೂ ಅವಿನಾಭಾವ ಸಂಬಂಧ ಹೊಂದಿದೆ. ಶಿಸ್ತಿಗೆ ಹೆಸರಾದ ಪೊಲೀಸರು ಒತ್ತಡದ ಮಧ್ಯೆ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯದ ಕಡೆ ಗಮನಹರಿಸಬೇಕು. ಸಹಜವಾಗಿ ಎಲ್ಲರಲ್ಲೂ ಬಾಲ್ಯದಿಂದಲೂ ನಾನಾ ಕ್ರೀಡೆಗಳ ಮೇಲೆ ಆಸಕ್ತಿ ಇರುತ್ತದೆ. ಇತ್ತೀಚೆಗೆ ಜಿಲ್ಲೆಯ ನಾನಾ ಕಡೆ ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳೊಂದಿಗೆ ಮಾತನಾಡುವಾಗ ಹೆಚ್ಚಿನ ಮಕ್ಕಳು ಪೊಲೀಸ್ ಆಗಬೇಕೆಂಬ ಬಯಕೆ ಹೊಂದಿರುವ ಬಗ್ಗೆ ತಿಳಿಯಿತು. ಅದರಲ್ಲೂ ಪೊಲೀಸ್ ವೃತ್ತಿಗೆ ಆಯ್ಕೆಯಾಗಲು ಕ್ರೀಡಾ ಪ್ರತಿಭೆಯೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಪೊಲೀಸರು ರಜೆ, ಹಬ್ಬ ಯಾವುದೂ ಇಲ್ಲದೇ ಸಮರ್ಪಕವಾಗಿ ಕೆಲಸ ಮಾಡುತ್ತಾರೆ. ಕ್ರೀಡಾಕೂಟ ತಮ್ಮೊಳಗಿನ ಕ್ರೀಡಾ ಪ್ರತಿಭೆಯನ್ನು ಹೊರಗಿಡಲು ಉಪಯುಕ್ತ ವೇದಿಕೆಯಾಗಿದೆ ಎಂದರು.
ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣ್‌ರಾವ್ ಮಾತನಾಡಿ, ನೂತನ ಜಿಲ್ಲೆಯಲ್ಲಿ ಮೊದಲ ಬಾರಿ ಪೊಲೀಸ್ ಇಲಾಖೆಯಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಪೊಲೀಸರಿಗೆ ಬಹಳ ಒತ್ತಡದ ಕಾರ್ಯ ನಿರ್ವಹಣೆ ನಡುವೆ ಕ್ರೀಡಾ ಸ್ಫೂರ್ತಿ ಮೆರೆಯಲು ಉತ್ತಮ ಅವಕಾಶ ಸಿಕ್ಕಿದೆ. ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ ಆನಂದಿಸಬೇಕೆಂದು ಹೇಳಿದರು. ಎಸ್ಪಿ ಡಾ.ಕೆ.ಅರುಣ್ ಮಾತನಾಡಿದರು. ಕ್ರೀಡಾಕೂಟದಲ್ಲಿ ಕೂಡ್ಲಿಗಿ, ಹರಪನಹಳ್ಳಿ, ಹೊಸಪೇಟೆ ಉಪವಿಭಾಗ ಹಾಗೂ ಡಿಎಆರ್ ಮತ್ತು ಮಹಿಳಾ ತಂಡ ಸೇರಿ 5 ತಂಡಗಳು ಭಾಗವಹಿಸಿದ್ದವು.