ಹೊಸಪೇಟೆ: ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರು ಉಪಧನ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ, ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿವೃತ್ತ ಅಂಗನವಾಡಿ ನೌಕರರ ಬೃಹತ್ ಸಮಾವೇಶವನ್ನು ತಾಲೂಕಿನ ಕಮಲಾಪುರದ ಶಾದಿ ಮಹಲ್‌ನಲ್ಲಿ ಜೂ.29ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ.ಇಸ್ಮಾಯಿಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾತನಾಡಿದ ಅವರು, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರಿಗೆ ಉಪಧನ ಪರಿಹಾರ ಒದಗಿಸಬೇಕು ಎಂದು ಸುಪ್ರಿಂಕೋರ್ಟು ಆದೇಶ ಹೊರಡಿಸಿದೆ. ಈ ಆದೇಶದನ್ವಯ 2023-24 ಸರ್ಕಾರ ಪ್ರಸಕ್ತ ಹಣಕಾಸು ವರ್ಷದಿಂದಲೇ ನಿವೃತ್ತಿ ಹೊಂದಿದ ಅಂಗನವಾಡಿ ನೌಕರರಿಗೆ ಉಪಧನ ಪರಿಹಾರ ಒದಗಿಸಿ ಎಂದು ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ, ಈ ಕುರಿತು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶವನ್ನು ಸಂಘಟಿಸಲಾಗಿದ್ದು, ಕಲ್ಯಾಣ ಕರ್ನಾಟದ ಏಳು ಜಿಲ್ಲೆಗಳ ನಿವೃತ್ತ ಅಂಗನವಾಡಿ ನೌಕರರು ಭಾಗವಹಿಸಲಿದ್ದಾರೆ. ಸುಪ್ರಿಂಕೋರ್ಟು ಆದೇಶವನ್ನು ಜಾರಿಗೊಳಿಬೇಕು. ಈ ಮೂಲಕ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರಿಗೆ ಶೀಘ್ರ ಉಪಧನ ಪರಿಹಾರ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸಮಾವೇಶದಲ್ಲಿ ಹಕ್ಕೋತ್ತಾಯ ಮಂಡಿಸಲಾಗುವುದು ಎಂದರು.
ಪ್ರಮುಖರಾದ ಗಡಾದ್ ವೀರಣ್ಣ, ಅಬ್ದುಲ್ ಇದ್ದರು.