ಹೊಸಕೋಟೆ: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ತಾಲೂಕಿನಲ್ಲಿ ವಿವಿಧೆಡೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಹಾನಿ ಪರಿಶೀಲಿಸಿ ಮಾತನಾಡಿದರು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಅನೇಕ ಕಡೆಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಈ ಬಗ್ಗೆ ಪರಿಶೀಲಿಸಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತೋಟಗಾರಿಕೆ ಬೆಳೆನಾಶ: ತಾಲೂಕಿನಲ್ಲಿ ಪ್ರಸಕ್ತ ಮಳೆಯಿಂದಾಗಿ 17.59 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಭಾನುವಾರ ಸುರಿದ ಮಳೆಗೆ ಮತ್ತಷ್ಟು ಹೆಕ್ಟೇರ್ ಪ್ರದೇಶ ಜಲಾವೃತಗೊಂಡು ಹಾನಿಯಾಗಿದೆ. ಇದರ ಅಂಕಿ-ಅಂಶ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಶೀಘ್ರ ತಲುಪಿಸಬೇಕು. ಸರ್ಕಾರದಿಂದ ದೊರೆಯಬಹುದಾದ ಪರಿಹಾರ ನೀಡಲು ಗಮನ ಸೆಳೆಯಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ತಾಲೂಕಿನಲ್ಲಿ 73 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಮೂರು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಅಗತ್ಯದಾಖಲೆ ಪಡೆದು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ಕೆರೆಗಳ ಬಳಿ ಎಚ್ಚರ: ದಶಕಗಳಲ್ಲೇ ಕಂಡುಕೇಳರಿಯದಂತಹ ಮಳೆ ಸುರಿಯುತ್ತಿದ್ದು, ತಾಲೂಕಿನ ಎಲ್ಲ ಕೆರೆಗಳು ತುಂಬುತ್ತಿವೆ, ಸಾರ್ವಜನಿಕರು ಸಂತಸಗೊಂಡು ಕೋಡಿ ಹರಿಯುವುದನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಹೋಗಿಬರುತ್ತಿರುವ ದೃಶ್ಯ ಕಂಡುಬರುತ್ತಿವೆ. ಇದು ಸಂತಸದ ವಿಷಯವೇ, ಆದರೆ ಕೆರೆಗಳ ಹತ್ತಿರ ಎಚ್ಚರಿಕೆವಹಿಸಬೇಕು. ದಿನೇ ದಿನೆ ನೀರಿನ ಹರಿವು ಹೆಚ್ಚುತ್ತಿದ್ದು, ಮೈಮರೆತರೆ ಅನಾಹುತವಾಗುವ ಸಾಧ್ಯತೆ ಇದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಒತ್ತುವರಿ ತೆರವು ಮಾಡಬೇಕು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನಲ್ಲಿರುವ ಸಾಕಷ್ಟು ಕೆರೆಗಳು ತುಂಬಿ ಹೋಗಿದ್ದು, ಕೆಲವು ಕೆರೆಗಳ ಕಟ್ಟೆ, ಕಾಲುವೆಗಳು ಲೀಕೇಜ್ ಆಗಿದೆ. ಇದರಿಂದಾಗಿ ತೋಟಗಾರಿಕೆ ಬೆಳೆ ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿದೆ. 3,211 ಎಕರೆ ವಿಸ್ತೀರ್ಣವುಳ್ಳ ಹೊಸಕೋಟೆಯ ದೊಡ್ಡ ಅಮಾನಿಕೆರೆ 1992 ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಕೋಡಿ ಹೋಗಿತ್ತು. ಆದರೆ ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆರೆ ಕೋಡಿ ಹೋಗಿದೆ ಎಂದು ಸಚಿವರು ನೆನಪು ಮಾಡಿಕೊಂಡರು. ರಾಜ ಕಾಲುವೆಗಳ ಒತ್ತುವರಿ ತೆರವುಗೊಳಿಸದ ಪರಿಣಾಮ ಗ್ರಾಮಗಳಿಗೆ ನೀರು ನುಗ್ಗಿ ಕೆರೆಯಂತಾಗಿದ್ದು, ಭಾರಿ ಮಳೆಯಿಂದಾಗಿ ಮನೆಗಳು ಕುಸಿಯುತ್ತಿವೆ. ತಹಸೀಲ್ದಾರ್ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸರ್ವೇ ಇಲಾಖೆ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇನ್ನಿತರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಬೆಳೆ ಪರಿಹಾರ, ಕೆರೆ, ರಸ್ತೆಗಳ ದುರಸ್ತಿ ಮನೆ ಕುಸಿದಿರುವುದಕ್ಕೆ ಪರಿಹಾರ ಹಾಗೂ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವುದು ಸೇರಿ ತುರ್ತಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.