ಹೊಸಕೋಟೆ/ನೆಲಮಂಗಲ: ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಸಂಚಲನ ಹುಟ್ಟುಹಾಕಿದ್ದ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣ ಶುಕ್ರವಾರ ಸುಖಾಂತ್ಯ ಕಂಡಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದಿಂದ ವೈದ್ಯರನ್ನು ಕರೆತಂದಿರುವ ಜಿಲ್ಲಾ ಪೊಲೀಸರು ನೆಲಮಂಗಲ ಠಾಣೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಡಿ.15ರಂದು ಸಂಜೆ ಕಚೇರಿ ಕೆಲಸ ಮುಗಿಸಿ ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳಿದ್ದರು. ಕೊಡಗು, ಎಚ್‌ಡಿ ಕೋಟೆ, ಮಡಿಕೇರಿ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿರುವ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ಪೊಲೀಸರು ಸ್ಪಂದಿಸದಿದ್ದಕ್ಕೆ ಬೇಸರ: ಬಿಜೆಪಿ ಮುಖಂಡರೊಬ್ಬರ ಧಮ್ಕಿಯೇ ನಾಪತ್ತೆಗೆ ಕಾರಣ ಎಂಬ ಮಾತು ಹರಿದಾಡಿತ್ತು. ಮತ್ತೊಂದೆಡೆ ನಕಲಿ ಕ್ಲಿನಿಕ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಅಪಹರಿಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಈ ಮಧ್ಯೆ ಬಿಜೆಪಿ ಮುಖಂಡರೊಬ್ಬರು ನಕಲಿ ಕ್ಲಿನಿಕ್ ವಿರುದ್ಧ ಕ್ರಮಕೈಗೊಳ್ಳದಂತೆ ಎಚ್ಚರಿಕೆ ನೀಡುವ ಜತೆಗೆ ಟಿಎಚ್‌ಒ ಅವರನ್ನು ಏಕವಚನದಲ್ಲಿ ನಿಂದಿಸಿದ್ದರು ಎನ್ನಲಾಗಿತ್ತು. ಈ ಕುರಿತು ಡಾ.ಮಂಜುನಾಥ್ ಠಾಣೆಗೆ ತೆರಳಿದರೆ ಪೊಲೀಸರು ಸ್ಪಂದಿಸಲಿಲ್ಲ. ಇದರಿಂದ ವೈದ್ಯರು ನೊಂದು ಮನೆ ತೊರೆದಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಟಿಎಚ್‌ಒ ನಾಪತ್ತೆಯಾಗಿರುವ ಬಗ್ಗೆ ಸ್ನೇಹಿತ ಗೋಪಾಲ್ ಕೃಷ್ಣ ಎಂಬುವವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಬಿಜೆಪಿ ಮುಖಂಡನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದು, ಸತ್ಯಾಸತ್ಯತೆ ಹೊರಬೀಳಬೇಕಿದೆ.
ನಕಲಿ ಕ್ಲಿನಿಕ್ ಮೇಲೆ ದಾಳಿ: ಹೊಸಕೋಟೆಯಲ್ಲಿ ನಕಲಿ ಕ್ಲಿನಿಕ್‌ಗಳು ತಲೆ ಎತ್ತಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇತ್ತೀಚಿಗೆ ಟಿಎಚ್‌ಒ ಡಾ. ಮಂಜುನಾಥ್ ದಾಳಿ ನಡೆಸಿದ್ದರು. 3 ದಿನದ ಹಿಂದೆ ನಕಲಿ ಕ್ಲಿನಿಕ್‌ವೊಂದರಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಡಿ.16 ರಂದು ಜಿಲ್ಲಾ ವೈದ್ಯಾಧಿಕಾರಿ ಮಂಜುಳಾ ದೇವಿ ಕ್ಲಿನಿಕ್ ಗೆ ಬೀಗ ಮುದ್ರೆ ಹಾಕಿ ವೈದ್ಯ ಮೋಹನ್ ಎಂಬುವವರಿಗೆ ನೋಟಿಸ್ ನೀಡಿದ್ದರು. ಡಾ.ಮೋಹನ್ ರಾಜಕೀಯ ಪ್ರಭಾವ ಬಳಸಿ ವೈದ್ಯಾಧಿಕಾರಿ ಮೇಲೆ ಒತ್ತಡ ಹೇರಿದ್ದರು ಎಂಬ ಮಾತು ಕೇಳಿಬಂದಿತ್ತು. ಡಿ.15ರ ಸಂಜೆಯಿಂದಲೇ ವೈದ್ಯಾಧಿಕಾರಿ ಕಣ್ಮರೆಯಾಗಿದ್ದರಿಂದ ಕ್ಲಿನಿಕ್ ಮೇಲಿನ ದಾಳಿ ಈ ಪ್ರಕರಣಕ್ಕೆ ತಳಕು ಹಾಕಿಕೊಂಡಿತ್ತು.
ಪ್ರತಿಭಟಿಸಿದ್ದ ಆರೋಗ್ಯ ಸಿಬ್ಬಂದಿ: ವೈದ್ಯರ ನಾಪತ್ತೆ ಪ್ರಕರಣ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಎಲ್ಲೆಡೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿ ವೈದ್ಯರನ್ನು ಹುಡುಕಿಕೊಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರು. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾರ್ಗದರ್ಶನದಲ್ಲಿ 10 ತಂಡ ರಚಿಸಲಾಗಿತ್ತು. ಮೊಬೈಲ್ ಸ್ವಿಚ್ಡ್‌ಆ್ ಆಗಿದ್ದರಿಂದ ಮಂಜುನಾಥ್ ಪತ್ತೆ ಪೊಲೀಸರಿಗೆ ತಲೆನೋವು ತರಿಸಿತ್ತು. ಎರಡು ದಿನದ ಹಿಂದೆ ಚನ್ನಪಟ್ಟಣದ ಅಂಗಡಿಯೊಂದರ ಮುಂದೆ ಮಂಜುನಾಥ್ ಕಾರಿಗೆ ಪಂಚರ್ ಹಾಕಿಸಿಕೊಂಡು ಹೋಗಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಮೈಸೂರಿನ ಕೆಲ ಭಾಗಗಳಲ್ಲಿ ವೈದ್ಯರು ಸಂಚರಿಸಿದ್ದ ಸುಳಿವು ಸಿಕ್ಕಿತ್ತಾದರೂ ಇರುವಿಕೆ ಪತ್ತೆಯಾಗಿರಲಿಲ್ಲ.
ಕೊಲೆ ಬೆದರಿಕೆ ಹಾಕಿದ್ದರಿಂದ ಬೇಸರ: ಡಿ.15 ರಂದು ಕಚೇರಿಗೆ ಬಂದ ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದೆ. ಹೊಸಕೋಟೆ ನಗರ ಠಾಣೆಯಲ್ಲಿ ಇಬ್ಬರ ನಡುವೆ ಸಂಧಾನ ಮಾಡಲಾಗಿತ್ತು. ಅದಾದ ನಂತರ ಬೈಕಿನಲ್ಲಿ ಬಂದು ನನ್ನ ಕಾರನ್ನು ಅಡ್ಡಗಟ್ಟಿದ ಅಪರಿಚಿತ ಕೊಲೆ ಬೆದರಿಕೆ ಹಾಕಿದ್ದ. ಬೇಸರಗೊಂಡು ಯಾರಿಗೂ ಹೇಳದೆ ಹೊರಟಿದ್ದರಿಂದ ಅನೇಕ ಕರೆಗಳು ಬರುತ್ತಿದ್ದವು. ಆದ್ದರಿಂದ ೆನ್ ಸ್ವಿಚ್ಡ್‌ಆ್ ಮಾಡಿದ್ದೆ ಎಂದು ಟಿಎಚ್‌ಒ ಹೇಳಿಕೆ ನೀಡಿದ್ದಾರೆ.
ಗುರುವಾರ ರಾತ್ರಿ ಹಾಸನ ಬಳಿ ಲಾಡ್ಜ್‌ನಲ್ಲಿ ತಂಗಿದ್ದೆ. ಆಗ ಟಿವಿಯಲ್ಲಿ ನನ್ನ ನಾಪತ್ತೆ ಪ್ರಕರಣ ಪ್ರಸಾರವಾಗಿದ್ದನ್ನು ಗಮನಿಸಿದೆ. ಆಸ್ಪತ್ರೆಯ ನನ್ನ ಸಹದ್ಯೋಗಿಗಳು ಕಣ್ಣೀರಿಡುತ್ತಿದ್ದ ದೃಶ್ಯಗಳನ್ನು ಕಂಡು ಮನಸ್ಸಿಗೆ ನೋವಾಗಿ 17ರಂದು ಪತ್ನಿಗೆ ಕರೆ ಮಾಡಿದ್ದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಎಸ್‌ಪಿಗೆ ಕರೆ: ಡಿ.18ರಂದು ಎಸ್‌ಪಿಗೆ ಕರೆ ಮಾಡಿದ ಟಿಎಚ್‌ಒ ಚನ್ನರಾಯಪಟ್ಟಣ ಸಮೀಪದ ಹಿರಿಸಾವೆ ಟೋಲ್ ಬಳಿ ಇರುವುದಾಗಿ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ಕರೆತಂದಿದ್ದಾರೆ.
ಹೊಸಕೋಟೆ ತಾಲೂಕು ವೈದ್ಯಾಧಿಕಾರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಧೈರ್ಯ ತುಂಬಲಾಗಿದೆ.ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡುವವರ ಪರ ಸರ್ಕಾರ ಸದಾ ಇರುತ್ತದೆ ಡಾ ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ (ಚಿಕ್ಕಬಳ್ಳಾಪುರದಲ್ಲಿ)
ಬಿಜೆಪಿ ಮುಖಂಡನ ಸುತ್ತ ಪ್ರಕರಣ ಗಿರಕಿ: ಬಿಜೆಪಿ ಮುಖಂಡ ಹಾಗೂ ಆತನ ಸಂಗಡಿಗರ ಕೊಲೆ ಬೆದರಿಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಅನುಭವಿಸುತ್ತಿರುವ ಯಾತನೆಯನ್ನು ಬೊಟ್ಟು ಮಾಡಿದಂತಿದೆ. ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಶುಕ್ರವಾರ ಮನೆ ಸೇರಿದ್ದರೂ, ಈ ಪ್ರಕರಣ ಸರ್ಕಾರಿ ಸಿಬ್ಬಂದಿಯಲ್ಲಿ ತಳಮಳ ಹುಟ್ಟುಹಾಕಿದೆ. ಇದರೊಂದಿಗೆ ವೈದ್ಯಾಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಹಿಂದಿರುವ ಚರಿತ್ರೆ ಏನು? ಕೊಲೆ ಬೆದರಿಕೆ ಹಿನ್ನೆಲೆ ಏನು? ಪೊಲೀಸರ ಮುಂದಿನ ನಡೆಯೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಆಡಿಯೋ ವೈರಲ್: ಹೊಸಕೋಟೆ ತಾಲೂಕು ಬಿಜೆಪಿ ಮುಖಂಡ ಜಯರಾಜ್ ಎಂಬುವರು ಧಮ್ಕಿ ಹಾಕಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆೆ. ಡಾ.ಮಂಜುನಾಥ್ ಕಚೇರಿಗೆ ಬಂದು ನಕಲಿ ಕ್ಲಿನಿಕ್ ಮೇಲಿನ ದಾಳಿ ಸಂಬಂಧ ಕೂಗಾಡಿ, ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಸದ್ದು ಮಾಡುತ್ತಿದೆ. ಇದನ್ನು ವೈದ್ಯಾಧಿಕಾರಿಯೇ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.
ನನಗೆ ಜೀವಬೆದರಿಕೆ ಇದೆ: ನನಗೆ ಹಾಗೂ ಕುಟುಂಬದವರಿಗೆ ಜಯರಾಜ್ ಹಾಗೂ ಸಂಗಡಿಗರಿಂದ ಜೀವ ಬೆದರಿಕೆ ಇದೆ ಎಂದು ಖುದ್ದು ಡಾ.ಮಂಜುನಾಥ್ ಹೊಸಕೋಟೆ ಠಾಣೆ ಎದುರಿಗೆ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದೇನೆ. ಜೀವಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದ್ದರಿಂದ ಬೇಸತ್ತು ಮನೆತೊರೆದಿದ್ದೆ, ಮೂರು ದಿನ ಹಾಕಿದ್ದ ಬಟ್ಟೆಯಲ್ಲೇ ಇದ್ದೆ. ಊಟ ತಿಂಡಿಯನ್ನೂ ಸರಿಯಾಗಿ ಮಾಡಿಲ್ಲ, ಈ ಪ್ರಕರಣದಿಂದ ತೀವ್ರ ನೋವು ಅನುಭವಿಸಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.