ಎಸ್.ಸಿ.ಮಂಜುನಾಥ ಹೊಸಕೋಟೆ
ನಗರದಲ್ಲಿ ನಿತ್ಯ 20 ಟನ್‌ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದೆ. ಕಸ ವಿಲೇವಾರಿಗೆ ಜಾಗದ ಕೊರತೆ ಎಂಬ ನೆಪಹೇಳಿ ನಗರಸಭೆಯಿಂದಲೇ ಹೊರವಲಯಗಳಲ್ಲಿ ಬೆಂಕಿ ಹಾಕಿ ಕಸ ಕರಗಿಸುವ ಯತ್ನ ನಡೆಯುತ್ತಿದೆ.
ಹೌದು! ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸದ ಸಮರ್ಪಕ ವಿಲೇವಾರಿಯಿಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ, ಏತನ್ಮಧ್ಯೆ ನಗರಸಭೆ ಸಿಬ್ಬಂದಿಯೇ ಬೆಂಕಿ ಹಾಕಿ ಸ್ಥಳದಲ್ಲೇ ಕಸ ಕರಗಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ.
ಇದರ ನಡುವೆ ನಗರದಲ್ಲಿರುವ ಸರ್ಕಾರಿ ಜಾಗವನ್ನು ಖಾಸಗಿಯವರಿಂದ ಹಣ ಪಡೆದು ಗುಜರಿ ವ್ಯವಹಾರ ನಡೆಸಲು ನೀಡಲಾಗಿದೆ ಎನ್ನುವ ಆರೋಪವಿದೆ. ಈ ವ್ಯಾಪಾರಿಗಳು ಹೊರವಲಯದ ಜಾಗದಲ್ಲಿ ಕಸ ಸುರಿದು ಸುಟ್ಟರೂ ನಗರಸಭೆ ಜಾಣಕುರುಡು ಪ್ರದರ್ಶಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದು, ಪ್ರಶ್ನಿಸಿದರೆ ದೂರು ನೀಡಿದ್ದೇವೆ, ತನಿಖೆಯಾಗುತ್ತಿದೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಗುತ್ತಿಗೆದಾರರು ಪ್ಲಾಸ್ಟಿಕ್ ವಸ್ತುಗಳಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪಕ್ಕದ ಕೆರೆಗೆ ಹಾಕಿ ಬೆಂಕಿ ಹಚ್ಚಿ ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ನಗರದ ಖಾಜಿ ಮೊಹಲ್ಲಾದಲ್ಲಿರುವ ಕಸಾಯಿ ಖಾನೆಗಳ ತ್ಯಾಜ್ಯ ಕೆರೆಗೆ ಸುರಿಯಲಾಗುತ್ತಿದ್ದು, ಕೆಲ ಪ್ರಭಾವಿಗಳು ಕೆರೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಆ ಜಾಗದಲ್ಲಿ ಖಾಸಗಿಯವರಿಂದ ಕಸ ವಿಂಗಡಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಸ ವಿಲೇವಾರಿ ಮಾಡುವವರು ಹೇಳುತ್ತಾರೆ. ಈ ಬಗ್ಗೆ ನಗರಸಭೆ ಆಯುಕ್ತರು, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಸ್ಥಳ ಪರಿಶೀಲಿಸಿದರೂ ಕ್ರಮ ಕೈಗೊಂಡಿಲ್ಲ.
ಕೆರೆಭಾಗದಲ್ಲಿ ಅಳವಡಿಸಿರುವ ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸುವ ಕೇಬಲ್‌ಗಳನ್ನು ಈ ಖಾಸಗಿ ಕಸ ವಿಲೇವಾರಿದಾರರು ಕತ್ತರಿಸಿ ಅದರಲ್ಲಿನ ತಾಮ್ರದ ತಂತಿ ತೆಗೆಯಲು ಈ ರೀತಿ ಬೆಂಕಿ ಇಟ್ಟು, ನಂತರ ತಾಮ್ರದ ತಂತಿ ಕಬಳಿಸುತ್ತಾರೆ. ಇದರಿಂದ ಕೇಬಲ್‌ನ ರಬ್ಬರ್ ಮೇಲ್ಪದರ ಸುಡುವುದರಿಂದ ಹೊಗೆ ಹರಡಿ ಈ ಭಾಗದ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ.
ಹೆಸರು ಹೇಳಲಿಚ್ಛಿಸದ, ಸ್ಥಳೀಯ ನಿವಾಸಿ