ಮೂಡಿಗೆರೆ: ಕಳೆದ 15ದಿನದ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಅವರು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ಪ್ರಭಾರ ಅಧ್ಯಕ್ಷರಾಗಿ ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್ ಅಧಿಕಾರ ಸ್ವೀಕರಿಸಿದರು.
ಮೊದಲ 30 ತಿಂಗಳ ಅವಧಿ ಮುಕ್ತಾಯದ ನಂತರ ತಾಂತ್ರಿಕ ಕಾರಣದಿಂದ ಅಧ್ಯಕ್ಷರ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. 5 ತಿಂಗಳ ಹಿಂದೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಸದಸ್ಯೆ ಗೀತಾ ರಂಜನ್ ಅಜಿತ್ ಕುಮಾರ್ ಅವರನ್ನು ಅಧ್ಯಕ್ಷರಗಿ ಆಯ್ಕೆ ಮಾಡಲಾಗಿತ್ತು. ಅಂದು ಕಾಂಗ್ರೆಸನಲ್ಲಿ ನಡೆದ ಆಂತರಿಕ ಒಪ್ಪಂದದಂತೆ ಜನವರಿ 28ಕ್ಕೆ ಅವರ 5 ತಿಂಗಳ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಫೆ.3ರಂದು ರಾಜೀನಾಮೆ ನೀಡಿದ್ದರು. ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆಯಾಗುವವರೆಗೆ ಉಪಾಧ್ಯಕ್ಷ ಹೊಸಕೆರೆ ರಮೇಶ್ ಪ್ರಭಾರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನಿರ್ಗಮಿತ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್, ಸದಸ್ಯರಾದ ಕೆ.ವೆಂಕಟೇಶ್, ಜೆ.ಬಿ.ಧರ್ಮಪಾಲ್, ನಾಮ ನಿರ್ದೇಶಿತ ಸದಸ್ಯರಾದ ಬಿ.ಕೆ.ಜಯಮ್ಮ, ಸಿ.ಬಿ.ಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ಮುಖಂಡರಾದ ಯಾಕೂಬ್ ಗೋಣಿಗದ್ದೆ, ಎಂ.ಎಸ್.ಕೃಷ್ಣ, ಸಂಪತ್ ಕುಮಾರ್, ಬಿ.ಎಂ.ಶಂಕರ್, ರವಿ.ಕುನ್ನಳ್ಳಿ ಇತರರಿದ್ದರು.