ಜಿಲ್ಲೆ

ಹೊಸದುರ್ಗದಲ್ಲಿ ರಾಗಿ ಹಣಕ್ಕಾಗಿ ರೈತರ ಪರದಾಟ

ಹೊಸದುರ್ಗ: ಅಧಿಕೃತ ಗ್ರೈನ್ ವೋಚರ್ ನೀಡದ ಕಾರಣ ತಾಲೂಕಿನ 3800 ಕ್ಕೂ ಹೆಚ್ಚು ರೈತರು ರಾಗಿ ಮಾರಾಟ ಮಾಡಿದ ಹಣಕ್ಕಾಗಿ ಪರದಾಡುವಂತಾಗಿದೆ.

ಹೌದು, ಸಣ್ಣ ಮತ್ತು ಅತಿಸಣ್ಣ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆದಿತ್ತು.

ಈ ಬಾರಿ 12203 ಜನ ರೈತರು ರಾಗಿ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ 10885 ಕೃಷಿಕರು ಬೆಂಬಲ ಬೆಲೆಯಡಿ ಮಾರಾಟ ಮಾಡಿದ್ದಾರೆ.

ಇಲ್ಲಿಯವರೆಗೆ 7 ಸಾವಿರ ರೈತರಿಗೆ ಮಾತ್ರ ಹಣ ಪಾವತಿಸಲಾಗಿದೆ. ಉಳಿದ 3800 ರೈತರಿಗೆ ಹಣವೇ ಪಾವತಿಯಾಗಿಲ್ಲ.

ಅವ್ಯವಸ್ಥೆಗೆ ಕಾರಣವೇನು?
ರಾಗಿ ಮಾರಾಟ ಮಾಡಿದ 500ಕ್ಕೂ ಹೆಚ್ಚು ರೈತರಿಗೆ ಮಾರಾಟದ ವೇಳೆಯಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳು ಅಧಿಕೃತ ದೃಢೀಕರಣವಾದ ಗ್ರೈನ್ ಓಚರ್ ಬದಲು ಕೇವಲ ಬಿಳಿ ಚೀಟಿಯಲ್ಲಿ ಖರೀದಿಯ ವಹಿವಾಟು ನಮೂದಿಸಿ ನೀಡಿದ್ದಾರೆ.

ಇಲ್ಲಿವರೆಗೆ ಅಧಿಕೃತ ರಶೀದಿ ಸಿಗದ ಹಿನ್ನೆಲೆಯಲ್ಲಿ ರೈತರು ಹಣ ಪಡೆಯಲು ಪರದಾಡುವಂತಾಗಿದೆ.

ಸದ್ಯ ಖರೀದಿ ಕೇಂದ್ರ ಬಾಗಿಲು ಮುಚ್ಚಿದೆ. ರೈತರ ಸಮಸ್ಯೆ ಬಗೆಹರಿಸಬೇಕಾದ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ರೈತರ ಕೈಗೆ ಸಿಗುತ್ತಿಲ್ಲ.

ಖರೀದಿ ಮಾಡಿರುವ ರಾಗಿಯ ದಾಸ್ತಾನಿಗೂ ಉಗ್ರಾಣ ನಿಗಮದ ಸಂಗ್ರಹಗಾರಕ್ಕೆ ತಲುಪಿರುವ ರಾಗಿಯ ಪ್ರಮಾಣಕ್ಕೂ ಹೊಂದಿಕೆಯಾಗದೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಗ್ರೈನ್ ಓಚರ್ ನೀಡಲಾಗಿಲ್ಲ ಎನ್ನಲಾಗಿದೆ.

ಖರೀದಿಯಲ್ಲೂ ದೋಖಾ
ರಾಗಿ ಖರೀದಿಸುವಾಗ ಅಧಿಕಾರಿಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಗಿ ತೂಕ ಮಾಡುವ ಮೂಲಕ ಮೋಸ ಮಾಡಿದ್ದಾರೆ.

ಪ್ರತಿ 50 ಕೆಜಿ ರಾಗಿಗೆ 2 ಕೆ.ಜಿ ಹೆಚ್ಚಿಗೆ ತೂಕ ಮಾಡಿ ಪ್ರತಿ ಕ್ವಿಂಟಾಲ್ ರಾಗಿಗೆ 4 ಕೆ.ಜಿ ಹೆಚ್ಚಿಗೆ ರಾಗಿಯನ್ನು ರೈತರಿಂದ ಪಡೆಯಲಾಗಿದೆ. ಕೃಷಿಕರಿಂದ ಪಡೆದ ಹೆಚ್ಚಿನ ರಾಗಿ ಎಲ್ಲಿಗೆ ಹೋಯಿತು ಎನ್ನುವುದೇ ಯಕ್ಷ ಪ್ರಶ್ನೆ.

ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ಮೀತಿ ಮೀರಿದ ಭ್ರಷ್ಟಾಚಾರ ನಡೆಸಿದ್ದಾರೆ. ಪ್ರತಿ ಕ್ವಿಂಟಾಲ್ ರಾಗಿಗೆ 4 ಕೆಜಿಗೂ ಹೆಚ್ಚು ರಾಗಿ ಲೂಟಿ ಮಾಡಿದ್ದಾರೆ. 500ಕ್ಕೂ ಹೆಚ್ಚು ರೈತರಿಗೆ ಇಲ್ಲಿಯವರೆಗೆ ಗ್ರೈನ್ ಓಚರ್ ನೀಡಿಲ್ಲ. ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.ಕೊರಟಿಕೆರೆ ಮಹೇಶ್ವರಪ್ಪ, ಕಾರ್ಯಾಧ್ಯಕ್ಷ, ತಾ.ರೈತ ಸಂಘ
ಕೆಲ ರೈತರಿಗೆ ತಾಂತ್ರಿಕ ತೊಂದರೆಯಿಂದಾಗಿ ಗ್ರೈನ್ ಓಚರ್ ನೀಡಲಾಗಿರಲಿಲ್ಲ. ಬಹುತೇಕರಿಗೆ ಹಣ ಸಂದಾಯವಾಗಿದ್ದು, ಉಳಿದವರಿಗೂ ನೀಡಲಾಗುವುದು. ಸಮಸ್ಯೆ ಪರಿಹಾರಕ್ಕೆ ತಕ್ಷಣ ಯತ್ನಿಸಲಾಗುತ್ತಿದೆ.ಬಸವರಾಜಪ್ಪ, ಅಧಿಕಾರಿ, ರಾಗಿ ಖರೀದಿ ಕೇಂದ್ರ