ಹೊಸಪೇಟೆ: 6ನೇ ವೇತನ ಆಯೋಗದ ವರದಿ ಜಾರಿಗೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರ ಕೂಟ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಎರಡು ದಿನ ಪೂರೈಸಿದ್ದು, ಪ್ರಯಾಣಿಕರು ಪರದಾಡಬೇಕಾಯಿತು.
ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಶೀನಯ್ಯ ಕೆಲ ನೌಕರರ ಮನವೊಲಿಸಿ ಬಸ್ ಸಂಚರಿಸುವಂತೆ ಮಾಡುವಲ್ಲಿ ನಿತರಾಗಿದ್ದರು. ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ವಿಭಾಗದಿಂದ ಬೆರಳೆಣಿಕೆ ಬಸ್‌ಗಳು ಮಾತ್ರ ಸಂಚಾರ ಮಾಡಿದವು.
ಹೆಚ್ಚಿನ ಹಣ ವಸೂಲಿ
ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನದವರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿಗೆ ನಿಂತಿದ್ದಾರೆ. ಬಸ್ ಟಿಕೆಟ್ ದರವನ್ನಷ್ಟೇ ಪಡೆಯಬೇಕೆಂದು ತಾಕೀತು ಮಾಡಿ ಪ್ರಯಾಣಿಕರ ಸಂಚಾರಕ್ಕೆ ತಾತ್ಕಾಲಿಕ ಪರವಾನಗಿ ನೀಡಿ ಅವಕಾಶ ಕಲ್ಪಿಸಿದರೂ ಸಾರಿಗೆ ಸಂಸ್ಥೆಯ ಆದೇಶಕ್ಕೆ ಬೆಲೆ ಕೊಡದೆ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಪ್ರಯಾಣಿಕರಿಂದ ಕೇಳಿ ಬಂದವು.
ಬಸ್ ನಿಲ್ದಾಣದಲ್ಲೇ ಊಟ
ಬಳ್ಳಾರಿಯಿಂದ ಸವದತ್ತಿಗೆ ಹೊರಟಿದ್ದ ಕುಟುಂಬವೊಂದು, ಬಸ್‌ಗಳಿಲ್ಲದ ಕಾರಣ ಹೊಸಪೇಟೆ ನಿಲ್ದಾಣದಲ್ಲೇ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬುತ್ತಿ ಉಂಡು ಹಸಿವು ನೀಗಿಸಿಕೊಂಡಿತು. ಬಳ್ಳಾರಿಯಿಂದ ಖಾಸಗಿ ಬಸ್‌ನಲ್ಲಿ ಬಂದೆವು. ಇಲ್ಲಿಂದ ಹೇಗೆ ತೆರಳಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಗೋಳು ತೋಡಿಕೊಂಡರು. ಖಾಸಗಿ ವಾಹನಗಳು ಸಂಚರಿಸುತ್ತಿವೆ ಎಂಬ ಮನೋಭಾವದಿಂದ ಹೆಚ್ಚಿನವರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಹತ್ತಿರದ ಊರುಗಳಿಗೆ ತೆರಳುವವರು ಆಟೋಗಳಲ್ಲಿ ಸಾಗಿದರೆ, ದೂರದ ಊರುಗಳಿಗೆ ಹೋಗುವವರು ಖಾಸಗಿ ಬಸ್‌ಗಳಿಗಾಗಿ ಕಾಯುತ್ತಾ ಕುಳಿತಿದ್ದರು.