ಹೊಸಪೇಟೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಸ್ಥಾನಿಕ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಜಿಂದಾಲ್‌ಗೆ ಭೂಮಿ ಪರಭಾರೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಕ್ರೋಶ

ಹೊಸಪೇಟೆ: ಜಿಂದಾಲ್‌ಗೆ 3667 ಎಕರೆ ಭೂಮಿ ಮಾರಾಟಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದ ತಹಸೀಲ್ದಾರ್ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಏಕಾಏಕಿ ಜಿಂದಾಲ್‌ಗೆ ಭೂಮಿ ಪರಾಭಾರೆ ಮಾಡಲಾಗಿದೆ. ಇದಕ್ಕೆ ಕಾರಣರಾದ ಎಲ್ಲ ಸಚಿವರು ರಾಜೀನಾಮೆ ನೀಡಬೇಕು. ಸಮ್ಮಿಶ್ರ ಸರ್ಕಾರದ ಆಡಳಿತ ಸಂದರ್ಭ ಬಿಜೆಪಿಯು ಭೂಮಿ ಮಾರಾಟ ವಿರೋಧಿಸಿ ಹೋರಾಟ ಮಾಡಿತ್ತು. ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇಂದು ಅವರೇ ಸಚಿವರಾಗಿದ್ದರೂ ಭೂಮಿ ಮಾರಾಟವನ್ನು ತಡೆಯದೆ ಕೋವಿಡ್ ನೆಪ ಹೇಳಿ ನುಣಚಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನತೆಗೆ ದ್ವಂಧ್ವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅರಣ್ಯ ಮತ್ತು ಸರ್ಕಾರಿ ಜಮೀನುಗಳಲ್ಲಿ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾವಿರಾರು ಎಕರೆ ರೈತರ ಜಮೀನುಗಳಿಗೆ ಪಟ್ಟಾ ವಿತರಿಸಬೇಕು. ಮುಂಗಾರು ಬಿತ್ತನೆ ಆರಂಭ ಮುನ್ಸೂಚನೆ ಇರುವುದರಿಂದ ಕೃಷಿ ಇಲಾಖೆಯಲ್ಲಿ ಬೀಜ, ರಸಗೊಬ್ಬರ ಸಿ.ಟಿ. ಕಾಂಪ್ಲೆಕ್ಸ್ ಇತ್ಯಾದಿಗಳು ಕೊರತೆಯಾಗದಂತೆ ದಾಸ್ತಾನು ಮಾಡಿ ಉಚಿತವಾಗಿ ನೀಡಬೇಕು. ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಧೀನದಲ್ಲಿ ಆರಂಭಿಸಲು ಮುಂದಾಗಬೇಕು. ಇತ್ತೀಚೆಗೆ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಮತ್ತು ಆತ್ಮಹತ್ಯೆ ಮಾಡಕೊಂಡ ರೈತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕರ ರಾಜೀನಾಮೆಗೆ ಒತ್ತಾಯ
ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಜಿಲ್ಲೆಯ ರೈತರು, ಜನರ ಪರವಾಗಿದ್ದರೆ ಜಿಂದಾಲ್‌ಗೆ ಭೂಮಿ ಪರಾಭಾರೆ ಮಾಡಿರುವುದನ್ನು ವಿರೋಧಿಸಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜ ಒತ್ತಾಯಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರ ರಾಜೀನಾಮೆಗೆ ಒತ್ತಾಯಿಸಿ ಮೇ 5 ರಂದು ಜಿಲ್ಲಾದ್ಯಂತ ಎಲ್ಲ ತಾಲೂಕುಗಳ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದರು. ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮರಡಿ ಜಂಬಯ್ಯನಾಯಕ, ಆರ್.ಭಾಸ್ಕರರೆಡ್ಡಿ ಇದ್ದರು.