ಹೊಸಪೇಟೆ: ವಿಜಯನಗರ ಕ್ಷೇತ್ರದಲ್ಲಿರುವ ಅಂತ್ಯೋದಯ ಮತ್ತು ಬಿಪಿಎಲ್ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲು ಸಜ್ಜಾಗಿರುವ ಅರಣ್ಯ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಆನಂದಸಿಂಗ್, ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದ್ದಾರೆ.
ನಗರದ ಸಹಕಾರಿ ಕಲ್ಯಾಣಮಂಟಪ ಮತ್ತು ಪಟೇಲನಗರದ ಸಚಿವರ ಕಚೇರಿಯಲ್ಲಿ ಆಹಾರದ ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಪ್ರತಿ ಆಹಾರದ ಕಿಟ್‌ನಲ್ಲಿ ಆರು ಕೆಜಿ ಜೋಳ, ಮೂರು ಕೆಜಿ ಬೇಳೆ, ಎರಡು ಲೀಟರ್ ಅಡುಗೆ ಎಣ್ಣೆ, 400 ಗ್ರಾಂ ಖಾರದಪುಡಿ, 150 ಗ್ರಾಂ ಹಾಲಿನ ಪೌಡರ್, 100 ಗ್ರಾಂ ಅರಿಷಿಣ, 100 ಗ್ರಾಂ ಸಾಸಿವೆ, 100 ಗ್ರಾಂ ಜೀರಿಗೆ, 500 ಗ್ರಾಂ ಬೆಳ್ಳುಳ್ಳಿ ಹಾಗೂ ಒಂದು ಕೆಜಿ ಉಪ್ಪಿನ ಪ್ಯಾಕೇಟ್ ಒಳಗೊಂಡಿದೆ.
ಈ ಸಿದ್ಧತೆ ವಾರದಿಂದ ತೆರೆಮರೆಯಲ್ಲಿ ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಘೋಷಣೆ ಬೆನ್ನಲ್ಲೆ ಮಾಹಿತಿ ಬೆಳಕಿಗೆ ಬಂದಿದೆ. ಅಹಾರದ ಪ್ರತಿ ಬ್ಯಾಗ್ ಮೇಲೆ ಅರಣ್ಯ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಫೋಟೊ, ಹಸಿದ ಜೀವಗಳಿಗಾಗಿ ನೆರವಾಗೋಣ ಎಂಬ ಶೀರ್ಷಿಕೆ, ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶವುಳ್ಳ ಸ್ಟಿಕ್ಕರ್ ಅಂಟಿಸಲಾಗಿದೆ.